ಮೈಸೂರು: ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ, ಕೆಲವರನ್ನು ಲಾಡ್ಜ್ಗಳಲ್ಲಿ ಕ್ವಾರಂಟೈನ್ ಮಾಡಿದೆ. ಈ ವಿಚಾರ ತಿಳಿದ ಸ್ಥಳೀಯ ಜನರು, ನಮ್ಮ ಪ್ರದೇಶದ ಲಾಡ್ಜ್‌ನಲ್ಲಿ ಕ್ವಾರಂಟೈನ್ ಮಾಡುವುದು ಬೇಡ ಎಂದು ಪ್ರತಿಭಟಿಸಿರುವ ಘಟನೆ ನಗರದ ಮಂಡಿ ಮೊಹಲ್ಲಾದಲ್ಲಿ ನಡೆದಿದೆ.
ನಗರದ ಹೃದಯ ಭಾಗದಲ್ಲಿರುವ ಮಂಡಿ ಮೊಹಲ್ಲಾದಲ್ಲಿ ಜನಸಂದಣಿ ಹೆಚ್ಚಾಗಿದೆ. ಇಲ್ಲಿ ನಾಲ್ಕೈದು ಲಾಡ್ಜ್‌ಗಳು ಮತ್ತು ಹೋಟೆಲ್ಗಳಿವೆ. ಜಿಲ್ಲಾಡಳಿತವು ಹೊರಗಡೆಯಿಂದ ಬಂದ ಕೆಲವು ಜನರನ್ನು ಕೋವಿಡ್ ಆಸ್ಪತ್ರೆಗಳು ಮತ್ತು ನಗರದಲ್ಲಿರುವ ಕೆಲವು ಲಾಡ್ಜ್ಗಳಲ್ಲಿ ಕ್ವಾರಂಟೈನ್ ಮಾಡಿದೆ. ಇದು ಇಲ್ಲಿನ ನಿವಾಸಿಗಳ ನಿದ್ದೆ ಕೆಡಿಸಿದೆ.
ನಮ್ಮ ಏರಿಯಾದಲ್ಲಿ ಜನಸಂದಣಿ ಹೆಚ್ಚಾಗಿದೆ. ಮಕ್ಕಳು, ವೃದ್ಧರು ಇಲ್ಲಿದ್ದಾರೆ. ನೀವು ಇಲ್ಲಿ ಕ್ವಾರಂಟೈನ್ ಮಾಡಿದರೆ ನಮ್ಮ ಅಕ್ಕಪಕ್ಕದವರಿಗೂ ಖಾಯಿಲೆ ಹರಡುತ್ತದೆ ಎಂದು ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಸ್ಥಳೀಯರೊಂದಿಗೆ ಮಾತನಾಡಿ, ಲಾಡ್ಜ್‌ನಲ್ಲಿ ಯಾರನ್ನೂ ಕ್ವಾರಂಟೈನ್ ಮಾಡುವುದಿಲ್ಲ. ಈಗಾಗಲೇ ಲಾಡ್ಜ್ ನಲ್ಲಿದ್ದ ವ್ಯಕ್ತಿಗೆ ಬೇರೆಡೆ ವ್ಯವಸ್ಥೆ ಮಾಡಿದ್ದೇವೆ ಎಂದು ತಿಳಿಸಿದರು. ನಂತರ ಜನರು ನಿಟ್ಟುಸಿರುವ ಬಿಟ್ಟು ತಮ್ಮ ಮನೆಗಳತ್ತ ಹೆಜ್ಜೆ ಹಾಕಿದರು.