ಮೈಸೂರು: ಕೊರೊನಾ ಟೆಸ್ಟಿಂಗ್ ವೇಳೆ ಕೆಲವರು ತಪ್ಪು ವಿಳಾಸ ಮತ್ತು ರಾಂಗ್ ನಂಬರ್ ನೀಡುತ್ತಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹೆಚ್ಚು-ಹೆಚ್ಚು ಟೆಸ್ಟಿಂಗ್ ಗಳಿಗೆ ಮುಂದಾಗಿದೆ. ಅದರಂತೆ ರ‌್ಯಾಪಿಡ್ ಟೆಸ್ಟ್ ಸಂದರ್ಭದಲ್ಲಿ ಕೊರೊನಾ ಲಕ್ಷಣ ಇರುವ ವ್ಯಕ್ತಿಗಳ ವಿಳಾಸ ಮತ್ತು ಮೊಬೈಲ್ ನಂಬರ್ ಗಳನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ದಾಖಲಿಸಿಕೊಳ್ಳುತ್ತಾರೆ. ಈ ವೇಳೆ ಕೆಲವರು ತಪ್ಪು ವಿಳಾಸ ಮತ್ತು ರಾಂಗ್ ನಂಬರ್ ನೀಡುತ್ತಿದ್ದು, ಟೆಸ್ಟಿಂಗ್ ಮಾಡಿಸಿದವರ ವರದಿ ಪಾಸಿಟಿವ್ ಬಂದರೆ ಅವರನ್ನು ಪತ್ತೆ ಹಚ್ಚುವುದು ಜಿಲ್ಲಾಡಳಿತಕ್ಕೆ ಕಷ್ಟವಾಗುತ್ತಿದೆ.
ಆರೋಗ್ಯಾಧಿಕಾರಿಗಳನ್ನು ಯಾಮಾರಿಸುತ್ತಿರುವ ಸೋಂಕಿತರು: ರ‌್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಗೆ ಒಳಪಟ್ಟ 230 ಮಂದಿ ನೀಡಿರುವ ಮೊಬೈಲ್ ನಂಬರ್ ತಪ್ಪಾಗಿದ್ದು, ಈ 230 ಮಂದಿ ಟೆಸ್ಟ್ ವರದಿ ಪಾಸಿಟಿವ್ ಬಂದಿದೆ. ಇವರುಗಳನ್ನು ಪತ್ತೆ ಹಚ್ಚುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿದೆ. ಈ ವ್ಯಕ್ತಿಗಳು ನೀಡಿರುವ ಮೊಬೈಲ್ ನಂಬರ್ ಗೆ ಕರೆ ಮಾಡಿದರೆ ರಾಂಗ್ ನಂಬರ್ ಎನ್ನುತ್ತಾರೆ ಅಥವಾ ಬೇರೆ ಯಾರೋ ಕರೆ ಸ್ವೀಕರಿಸುತ್ತಾರೆ. ಜಿಲ್ಲಾಡಳಿತ ಪೊಲೀಸರ ಸಹಾಯದೊಂದಿಗೆ ಅವರ ವಿಳಾಸ ಹುಡುಕಿ ಅವರನ್ನು ಪತ್ತೆ ಹಚ್ಚುತ್ತಿದೆ. ಆದ್ರೆ ಹಲವರು ವಿಳಾಸವನ್ನು ಸಹ ತಪ್ಪಾಗಿ ನೀಡಿದ್ದಾರೆ.
ಆರೋಗ್ಯ ಇಲಾಖೆಯ ಸಿಬ್ಬಂದಿ ಪೊಲೀಸರ ನೆರವು ಪಡೆದುಕೊಂಡು ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ. ಪಾಸಿಟಿವ್ ವರದಿ ಬಂದ ವ್ಯಕ್ತಿಗಳನ್ನು ಪತ್ತೆ ಮಾಡುವುದು ತಡವಾದರೆ ಅವರೊಂದಿಗೆ ಸಂಪರ್ಕ ಇರುವ ವ್ಯಕ್ತಿಗಳಿಗೂ ಸೋಂಕು ತಗುಲುವ ಸಾಧ್ಯತೆ ಇರುವುದರಿಂದ ಪೊಲೀಸರ ಜೊತೆಗೂಡಿ ರಾಂಗ್ ನಂಬರ್ ನೀಡಿರುವ ವ್ಯಕ್ತಿಗಳನ್ನು ಪತ್ತೆ ಮಾಡಲಾಗುತ್ತಿದೆ.
ತಪ್ಪು ಮಾಹಿತಿ ನೀಡಿದರೆ ಎಫ್.ಐ.ಆರ್ ದಾಖಲಿಸುತ್ತೇವೆ ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದ್ದರೂ ಸಹ ಈ ರೀತಿ ರಾಂಗ್ ನಂಬರ್ ಕೊಡುತ್ತಿದ್ದಾರೆ. ಇದರಿಂದ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಆರ್. ವೆಂಕಟೇಶ್ ಅವರು 'ಈಟಿವಿ ಭಾರತ' ಗೆ ದೂರವಾಣಿ ಮೂಲಕ ತಿಳಿಸಿದರು.