ಮೈಸೂರು: ಸರ್ಕಾರ ಆಧಾರ್ ಕಡ್ಡಾಯ ಎಂಬ ನೀತಿ ತಂದಾಗಿನಿಂದ ಜನಸಾಮಾನ್ಯರಿಗೆ ಆಧಾರ್ ಪಡೆಯುವುದೇ ಹರಸಾಹಸವಾಗಿದೆ. ಇನ್ನು ನಗರದ ಕೋಟಕ್ ಮಹೀಂದ್ರಾ ಬ್ಯಾಂಕ್ ಮುಂದೆ ಆಧಾರ್ ಕಾರ್ಡ್ ಪಡೆಯಲು ಮಹಿಳೆಯರು, ಮಕ್ಕಳು, ವಯೋವೃದ್ಧರು ಇಡೀ ರಾತ್ರಿ ಕಾಯಬೇಕಾದ ಪರಿಸ್ಥಿತಿ ಎದುರಾಗಿತ್ತು.
ಮಿನಿ ವಿಧಾನಸೌಧದಲ್ಲಿ ಆಧಾರ್ ಕಾರ್ಡ್ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಸರ್ವರ್ ಸಮಸ್ಯೆ ಎಂಬ ಸಿಬ್ಬಂದಿ ಮಾತಿನಿಂದ ಬೇಸತ್ತ ಜನ ಬ್ಯಾಂಕ್ ಮುಂದೆ ಜಾಗರಣೆ ಮಾಡಬೇಕಾಯಿತು. ಒಂದು ದಿನಕ್ಕೆ ಕೆವಲ 15 ಜನರಿಗಷ್ಟೆ ಅವಕಾಶ ನೀಡಿರುವುದರಿಂದ ಜನರು ಅಲೆದಾಡುವಂತಾಗಿದೆ.
ಆದ್ರೆ ಆಧಾರ್ ಕಾರ್ಡ್ ಕಡ್ಡಾಯ ಎನ್ನುವ ಸರ್ಕಾರ ಮಾತ್ರ ಜನಸಾಮಾನ್ಯರಿಗೆ ಕಾರ್ಡ್ ಒದಗಿಸುವ ಕುರಿತು ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸವಾಗಿದೆ. ಅಧಿಕಾರಿಗಳು ತಿಳಿದೂ ತಿಳಿಯದ ರೀತಿಯಲ್ಲಿ ಸುಮ್ಮನಿರುವುದು ಜನರಲ್ಲಿ ನಿರಾಶಾಭಾವನೆ ಉಂಟುಮಾಡಿದೆ.