ಮೈಸೂರು: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿದ್ದ ಪುತ್ರನ ಅಂಗಾಂಗ ದಾನ ಮಾಡುವ ಮೂಲಕ ಸಾವಿನಲ್ಲೂ ಪೋಷಕರು ಸಾರ್ಥಕತೆ ಮೆರೆದಿದ್ದಾರೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸಿಂಗಪುರ ಗ್ರಾಮದ ಎಸ್ ಎ ಸಚಿನ್(21) ಎಂಬಾತ ನವೆಂಬರ್ 28 ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ. ಕೂಡಲೇ ಆತನನ್ನು ಜೆಎಸ್‌ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ನೀಡಿದ ವೈದ್ಯರು ರೋಗಿಯ ಮೆದುಳು ನಿಷ್ಕ್ರಿಯಗೊಂಡಿರುವ ಬಗ್ಗೆ ನ.29 ರಂದು ಘೋಷಣೆ ಮಾಡಿದ್ದರು. ಇಂತಹ ದುಃಖದ ಸಂದರ್ಭದಲ್ಲಿಯೂ ಮೃತನ ಕುಟುಂಬಸ್ಥರು ಅಂಗಾಂಗ ದಾನ ಮಾಡಲು ನಿರ್ಧರಿಸಿ, ಮುಂದಿನ ಕ್ರಮ ಕೈಗೊಳ್ಳುವಂತೆ ಕೋರಿದ್ದರು.
ವೈದ್ಯರ ತಂಡ ರೋಗಿಯ ಹೃದಯ, ಎರಡು ಕಾರ್ನಿಯಾ (ಕಣ್ಣುಗಳು), ಎರಡು ಕಿಡ್ನಿ ಮತ್ತು ಲಿವರ್ ಕೊಯ್ಲು ಮಾಡಿ, ಅವಶ್ಯಕತೆಯಿದ್ದ ರೋಗಿಗಳಿಗೆ ಕಸಿ ಮಾಡಲು ಹೃದಯವನ್ನು ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ಮತ್ತು ಒಂದು ಕಿಡ್ನಿ ಮತ್ತು ಲಿವರ್ ಅನ್ನು ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ಪೋಲಿಸ್ ಇಲಾಖೆಯ ಸಹಕಾರದೊಂದಿಗೆ ಗ್ರೀನ್ ಕಾರಿಡಾರ್ ಮುಖಾಂತರ ರವಾನಿಸಿದೆ.
ಇದನ್ನೂ ಓದಿ: ಬ್ರೈನ್ ಡೆಡ್ ಆದ ಯುವಕನ ಅಂಗಾಂಗ ದಾನ: ಮಗನ ಸಾವಿನಲ್ಲೂ ಸಾರ್ಥಕತೆ ಮೆರೆದ ಪೋಷಕರು
ಜೊತೆಗೆ ಎರಡು ಕಾರ್ನಿಯಾಗಳನ್ನು ಬೆಂಗಳೂರಿನ ಲಯನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಅಂಗಾಂಗ ದಾನ ಮಾಡುವ ನಿರ್ಧಾರ ತೆಗೆದುಕೊಂಡ ಎಸ್.ಎ.ಸಚಿನ್ ಕುಟುಂಬ ಸದಸ್ಯರಿಗೆ ಜೆಎಸ್‌ಎಸ್ ಆಸ್ಪತ್ರೆ ಮತ್ತು ಆಡಳಿತ ಮಂಡಳಿ ಧನ್ಯವಾದ ಅರ್ಪಿಸಿದೆ.