ಮೈಸೂರು: ಪಾರಂಪರಿಕ ಶೈಲಿಯ ಪ್ರತಿಷ್ಠಿತ ಲಲಿತಮಹಲ್ ಹೋಟೆಲ್ ನಿರ್ವಹಣೆ ಕೊರತೆಯಿಂದ ತಾಜ್ ಗ್ರೂಪ್ಗೆ ನೀಡಲು ಸಿದ್ಧತೆ ನಡೆದಿದೆ. ನಾಳೆ ಸಿಎಂ ನೇತೃತ್ವದಲ್ಲಿ ನಡೆಯಲಿರುವ ಮಹತ್ವದ ಸಭೆಯಲ್ಲಿ ಈ ಕುರಿತ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ನೂರು ವರ್ಷ ತುಂಬಿರುವ ಲಲಿತಮಹಲ್ ಪ್ಯಾಲೇಸ್ ಪುನರ್ನವೀಕರಣ, ಹೊಸ ಶೈಲಿಯಲ್ಲಿ ನಿರ್ವಹಣೆ ಮಾಡುವ ಉದ್ದೇಶದಿಂದ ಜೆಎಲ್ಆರ್ನ ಸುಪರ್ದಿಯಲ್ಲಿರುವ ಜವಾಬ್ದಾರಿಯನ್ನು ವಾಪಸ್ ಪಡೆದು, ತಾಜ್ ಗ್ರೂಪ್ಗೆ ವಹಿಸುವ ಚಿಂತನೆ ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ರಚಿಸಿರುವ ಸಂಪುಟ ಉಪಸಮಿತಿ ಸಭೆಯಲ್ಲಿ ಈ ವಿಷಯ ಮಂಡನೆಯಾಗಿದ್ದು, ಒಪ್ಪಿಗೆ ಸಿಕ್ಕಿದರೆ ಸಾಂಸ್ಕೃತಿಕ ನಗರಿಯ ಪಂಚತಾರಾ ಹೋಟೆಲ್ ಖಾಸಗಿ ಒಡೆತನಕ್ಕೆ ಸೇರಲಿದೆ.
2 ವರ್ಷಕ್ಕೆ 2 ಕೋಟಿ ಲಾಭ: ಲಲಿತಮಹಲ್ ಪ್ಯಾಲೇಸ್ ನಿರ್ವಹಣೆ ಜವಾಬ್ದಾರಿಯನ್ನು ಕೇಂದ್ರ ಸಚಿವರಾಗಿದ್ದ ಅನಂತ ಕುಮಾರ್ ಅವರು ಭಾರತೀಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಸುಪರ್ದಿಯಿಂದ ರಾಜ್ಯ ಸರ್ಕಾರದ ವಶಕ್ಕೆ ನೀಡುವಂತೆ ನೋಡಿಕೊಂಡಿದ್ದರು. ನಂತರದ ದಿನಗಳಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆಗೆ ಆ ಜವಾಬ್ದಾರಿ ವಹಿಸಲಾಗಿತ್ತು. ಆದರೆ, ಸರಿಯಾದ ನಿರ್ವಹಣೆ ಮಾಡದ ಕಾರಣ ಇಲಾಖೆಗೆ ಪ್ರತಿ ವರ್ಷ 3 ಕೋಟಿ ರೂ.ಗಳಷ್ಟು ನಷ್ಟ ಉಂಟಾಗುತ್ತಿದ್ದು, 2017ರಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಗೆ ವಹಿಸಿಕೊಡಲಾಗಿತ್ತು. ಅಂದಿನಿಂದ ಸುಸೂತ್ರವಾಗಿ ನಿರ್ವಹಣೆ ಮಾಡಿಕೊಂಡು ಬರುತ್ತಿದ್ದರು. ಒಂದು ವರ್ಷಕ್ಕೆ 1.50 ರಿಂದ 2 ಕೋಟಿ ರೂಗಳಷ್ಟು ಲಾಭದತ್ತ ಲಲಿತ್ ಮಹಲ್ ಸಾಗಿದೆ.
ಅನುಮೋದನೆ ಸಿಗುವುದಷ್ಟೇ ಬಾಕಿ: ಲಲಿತ್ ಮಹಲ್ ಪ್ಯಾಲೇಸ್ ಹೋಟೆಲ್ ನಿರ್ವಹಣೆಯನ್ನು ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಯ ತೆಕ್ಕೆಯಿಂದ ತಾಜ್ ಗ್ರೂಪ್ಗೆ ವಹಿಸಲು ಈ ಹಿಂದೆ ಸಿದ್ಧತೆ ನಡೆದಿತ್ತು. ಆಗ ಸರ್ಕಾರದ ಒಡೆತನದಲ್ಲಿ ಇರುವುದನ್ನು ಖಾಸಗಿಯವರಿಗೆ ವಹಿಸಿಕೊಳ್ಳುವ ಬಗ್ಗೆ ಅಪಸ್ವರ ಕೇಳಿ ಬಂದಿದ್ದರಿಂದ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿ ರಚಿಸಲಾಗಿದೆ. ಪ್ರವಾಸೋದ್ಯಮ ಸಚಿವರು, ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಜೆಎಲ್ಆರ್ ಅಧ್ಯಕ್ಷರು, ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ, ಅರಣ್ಯ ಇಲಾಖೆಯ ಕಾರ್ಯದರ್ಶಿಗಳು ಈ ಸಮಿತಿಯಲ್ಲಿದ್ದು, ಈಗಾಗಲೇ ಜೆಎಲ್ಆರ್‌ನಿಂದ ತಾಜ್ ಗ್ರೂಪ್ಗೆ ವಹಿಸುವ ಕುರಿತಂತೆ ಮಾಹಿತಿ ಸಂಗ್ರಹಿಸಿ ವರದಿಯನ್ನು ತಯಾರಿಸಲಾಗಿದೆ.
ಖಾಸಗಿ ತೆಕ್ಕೆಗೆ ವಹಿಸಲು ಪ್ರಮುಖ ಕಾರಣ?: ಲಲಿತಮಹಲ್ ಪ್ಯಾಲೇಸ್ ಕಟ್ಟಡವನ್ನು ಮುಂದಿನ ನೂರು ವರ್ಷಗಳ ಕಾಲ ನಿರ್ವಹಣೆ ಮಾಡುವ ಜೊತೆಗೆ ಮತ್ತಷ್ಟು ಹೊಸತನ ತರಬೇಕಿದೆ. ಕಟ್ಟಡದ ಕೆಲವು ಭಾಗಗಳು ಶಿಥಿಲಗೊಂಡಿರುವುದರಿಂದ ನವೀಕರಣಕ್ಕೆ ಅಂದಾಜು 50 ಕೋಟಿ ರೂ ಬೇಕಾಗುತ್ತದೆ. ಸರ್ಕಾರ ಆ ಹಣವನ್ನು ಭರಿಸಲು ಸಾಧ್ಯವಿಲ್ಲ. ಹಾಗಾಗಿ ತಾಜ್ ಗ್ರೂಪ್‌ನವರೇ ಅದನ್ನು ನವೀಕರಿಸಿ ಮುಂದಿನ ದಿನಗಳಲ್ಲಿ ನಿರ್ವಹಣೆ ಮಾಡಲು ಒಪ್ಪಿಕೊಂಡಿದ್ದು ಅವರಿಗೆ ವಹಿಸಲು ಸಿದ್ಧತೆ ನಡೆದಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಕೇರಳ ಸಿಎಂ ಪ್ರಯಾಣಿಸುತ್ತಿದ್ದ ವಿಮಾನದೊಳಗೂ ಯುವ ಕಾಂಗ್ರೆಸ್ ಪ್ರತಿಭಟನೆ