ಮೈಸೂರು: ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಅಂತೂ ಇಂತು ಸ್ವಂತ ಕಟ್ಟಡದ ಭಾಗ್ಯ ಒಲಿದು ಬಂದಿದೆ.
ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ ಆವರಣದಲ್ಲಿದ್ದ ಕನ್ನಡ ಅಧ್ಯಯನ ಕೇಂದ್ರವನ್ನು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದ ಉಮಾಶ್ರೀ ಬೆಂಗಳೂರಿಗೆ ಸ್ಥಳಾಂತರ ಮಾಡಿದ್ದರು. ಇದರಿಂದ ಮೈಸೂರಿನಲ್ಲಿ ಪ್ರತಿರೋಧ ವ್ಯಕ್ತವಾಗಿ ಮೈಸೂರಿನ ಸಾಹಿತಿಗಳು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಎಚ್ಚರಿಕೆ ನೀಡಿದ್ದರು.
ಸಾಹಿತಿಗಳ ಪತ್ರಕ್ಕೆ ತಲೆಬಾಗಿದ ಸಿದ್ದರಾಮಯ್ಯ, ಶಾಸ್ತ್ರೀಯ ಕನ್ನಡದ ಅತ್ಯುನ್ನತ ಕೇಂದ್ರವನ್ನು ಮೈಸೂರಿನಿಂದ ಸ್ಥಳಾಂತರ ಮಾಡದಂತೆ ಉಮಾಶ್ರೀ ಅವರಿಗೆ ತಿಳಿ ಹೇಳಿದರು. ನಂತರ ಸ್ಥಳಾಂತರ ಮಾಡುವುದನ್ನು ಕೈಬಿಟ್ಟು ಮೈಸೂರಿನಲ್ಲಿ ಕೇಂದ್ರವನ್ನು ಮುಂದುವರಿಸಲಾಯಿತು.
ಭಾರತೀಯ ಭಾಷಾ ಸಂಸ್ಥಾನದ ಆವರಣದಲ್ಲಿ ಇರುವ ಕಟ್ಟಡದಲ್ಲಿಯೇ ಕಾರ್ಯನಿರ್ವಹಿಸುತ್ತಿರುವ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಆರು ವರ್ಷಗಳಿಂದ ಸ್ವಂತ ಕಟ್ಟಡವಿರಲಿಲ್ಲ. ಇಂದಿನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅವರು ಕೆಲ ತಿಂಗಳ ಹಿಂದೆ ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯಲ್ಲಿ ಕ್ಯಾಂಪಸ್ಗೆ ಬಂದು ಸ್ವಂತ ಕಟ್ಟಡಕ್ಕೆ ಸ್ಥಳ ಪರಿಶೀಲನೆ ನಡೆಸಿದ್ದರು. ಸ್ಥಳ ನೀಡುವಂತೆ ಮೈಸೂರು ವಿವಿಗೆ ಪತ್ರದ ಮೂಲಕ ಮನವಿ ಮಾಡಿದ್ದರು.
ಅದರಂತೆ, ಮೈಸೂರು ವಿವಿಯು ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಸ್ವಂತ ಕಟ್ಟಡ ನೀಡಿದೆ. ಇದರಿಂದ ಆರು ವರ್ಷಗಳಿಂದ ಸ್ವಂತ ಕಟ್ಟಡವಿಲ್ಲದೇ ಇದ್ದ ಕೊರಗು ದೂರವಾಗಿದೆ. ನವೆಂಬರ್ 1 ರಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಚಂದ್ರಶೇಖರ ಕಂಬಾರ ಅವರು ನೂತನ ಕಟ್ಟಡ ಉದ್ಘಾಟನೆ ಮಾಡುವರು. ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದಲ್ಲಿ ಭಾಷಾ ಅಭಿವೃದ್ಧಿ ಹಾಗೂ ಸಾಹಿತ್ಯ ಚರ್ಚೆಗಳು ನಡೆಯಲಿದೆ.
ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಸಿ.ಜಿ. ವೆಂಕಟೇಶ್ ಮೂರ್ತಿ ಅವರು 'ಈಟಿವಿ ಭಾರತ'ದೊಂದಿಗೆ ನವೆಂಬರ್ ಒಂದರಂದು ಉದ್ಘಾಟನೆಗೊಳ್ಳಲಿರುವ ಕಾರ್ಯಕ್ರಮದ ಬಗ್ಗೆ ವಿವರಣೆ ನೀಡಿದರು.