ಮೈಸೂರು : ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದನ್ನು ಖಂಡಿಸಿ ಶುಕ್ರವಾರ ಕರ್ನಾಟಕ ಬಂದ್‌ಗೆ ಸಂಘಟನೆಗಳು ಕರೆ ಕೊಟ್ಟಿವೆ. ಹೀಗಾಗಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಹಲವು ಸಂಘಟನೆಯವರು ಬೆಂಬಲ ಸೂಚಿಸಿದ್ದಾರೆ. ಆದರೆ ನಗರ ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ಅವರು ಬಂದ್‌ಗೆ ಅವಕಾಶ ಇಲ್ಲ. ಮೆರವಣಿಗೆಗೂ ಅವಕಾಶ ಇಲ್ಲ. ಕೇವಲ ಹಳೆಯ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಧರಣಿಗೆ ಮಾತ್ರ ಅವಕಾಶ ನೀಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆಪ್ಟೆಂಬರ್ 29 ರಂದು ವಿವಿಧ ರಾಜಕೀಯ ಪಕ್ಷಗಳು, ಕನ್ನಡ ಒಕ್ಕೂಟ ಹಾಗೂ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿರುವುದು ಕಾನೂನು ಬಾಹಿರ ಹಾಗೂ ಸಂವಿಧಾನ ವಿರೋಧಿ. ಜೊತೆಗೆ ಜನಸಾಮಾನ್ಯರ ಮೂಲಭೂತ ಹಕ್ಕುಗಳಿಗೆ ಚ್ಯುತಿ ಆಗುವುದರಿಂದ ಬಂದ್‌ಗೆ ಮೈಸೂರಿನಲ್ಲಿ ಯಾವುದೇ ರೀತಿಯ ಮೆರವಣಿಗೆಗೆ ಅವಕಾಶ ಇಲ್ಲ. ಬಲವಂತವಾಗಿ ಯಾವುದೇ ರೀತಿಯ ಬಂದ್ ಮಾಡಿಸಲು ಅವಕಾಶ ಇಲ್ಲ. ಆದ್ದರಿಂದ ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳು ಹಳೆಯ ಜಿಲ್ಲಾಧಿಕಾರಿ ಕಚೇರಿಯ ಬಳಿ ಧರಣಿ ಹಮ್ಮಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ ಎಂದು ರಮೇಶ್ ಬಾನೋತ್ ಹೇಳಿದ್ದಾರೆ.
ಅಲ್ಲದೆ, ಶುಕ್ರವಾರ, ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸುವ ತೀರ್ಮಾನವನ್ನು ಮುಂದಿನ ಪರಿಸ್ಥಿತಿ ನೋಡಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮೈಸೂರು ಜಿಲ್ಲಾಧಿಕಾರಿ ಕಚೇರಿಯಿಂದ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹಾಗಾದರೇ ಕರ್ನಾಟಕ ಬಂದ್‌ಗೆ ಬೆಂಬಲ ಸೂಚಿಸಿದ ಸಂಘಟನೆಗಳು ಯಾವುವು ಎಂಬ ವಿವರವಾದ ವರದಿ ಮಾಹಿತಿ ಇಲ್ಲಿದೆ..
ಹೋಟೆಲ್ ಮಾಲೀಕರ ಸಂಘ ಬೆಳಗ್ಗೆ ತುರ್ತು ಸಭೆ ನಡೆಸಿ ಬೆಳಗ್ಗೆ 6 ರಿಂದ ಸಂಜೆ 6ರ ವರೆಗೆ ಕರ್ನಾಟಕ ಬಂದ್‌ಗೆ ಮೈಸೂರು ನಗರದ ಹೋಟೆಲ್ಗಳು, ರೆಸ್ಟೋರೆಂಟ್ಗಳು, ಬೇಕರಿಗಳು, ಸ್ವೀಟ್ ಶಾಪ್ಗಳು ಫಾಸ್ಟ್ ಫುಡ್ ಟೀ ಮತ್ತು ಕಾಫಿ ಅಂಗಡಿಗಳು ಮುಚ್ಚಲಿವೆ ಹಾಗೂ ಬಂದ್‌ಗೆ ಬೆಂಬಲ ಸೂಚಿಸಲಾಗಿದೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದರ ಜೊತೆಗೆ ಮೈಸೂರು ನಗರದ ಆಟೋ ಮಾಲೀಕರ ಸಂಘ ಹಾಗೂ ಆಟೋ ಚಾಲಕರ ಸಂಘ, ಲಾರಿ ಮಾಲೀಕರ ಸಂಘ, ಕನ್ನಡಪರ ಸಂಘಟನೆಗಳು, ರೈತ ಪರ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ.
ಬಂದ್‌ಗೆ ಬೆಂಬಲ ನೀಡುವಂತೆ ಗುಲಾಬಿ ಹೂ ನೀಡಿ ಮನವಿ : ಇನ್ನೊಂದೆಡೆ ನಗರದ ದೇವರಾಜ ಅರಸು ರಸ್ತೆಯಲ್ಲಿರುವ ಪ್ರತಿಯೊಂದು ಅಂಗಡಿಗಳಿಗೆ, ರಸ್ತೆ ಬದಿ ವ್ಯಾಪಾರಿಗಳಿಗೆ ಮತ್ತು ಪಾದಾಚಾರಿಗಳಿಗೆ ಗುಲಾಬಿ ಹೂ ನೀಡಿ ಬಂದ್‌ಗೆ ಬೆಂಬಲ ನೀಡುವಂತೆ ವಿಷ್ಣು ಸೇನಾ ಸಮಿತಿ ಮನವಿ ಮಾಡಿದೆ.
ನಂತರ ಮಾತನಾಡಿದ ವಿಷ್ಣುಸೇನಾ ಸಮಿತಿಯ ಅಧ್ಯಕ್ಷರಾದ ಎಂ.ಡಿ. ಪಾರ್ಥಸಾರಥಿ, ಕನ್ನಡ ನೆಲ, ಜಲ, ಭಾಷೆ ಹೋರಾಟಕ್ಕೆ ಅಂದಿನಿಂದಲೂ ಡಾ. ರಾಜಕುಮಾರ್ ಹಾಗೂ ವಿಷ್ಣುವರ್ಧನ್ ಮೊದಲು ಹೋರಾಟಕ್ಕೆ ನಿಲ್ಲುತ್ತಿದ್ದರು. ಅದರಂತೆ ಶುಕ್ರವಾರ ನಡೆಯುವ ಕರ್ನಾಟಕ ಬಂದ್ ಶಾಂತಿಯುತವಾಗಿ ಯಶಸ್ವಿಯಾಗಲಿ ಎಂದು ಅಂಗಡಿ ಮಾಲೀಕರಿಗೆ ಹಾಗೂ ನೌಕರರಿಗೆ ಗುಲಾಬಿ ಹೂ ನೀಡಿ ಮನವಿ ಮಾಡಿದ್ದೇವೆ. ಶುಕ್ರವಾರ ಸಹ ನಮ್ಮ ವಿಷ್ಣುವರ್ಧನ್ ಸೇನಾ ಸಮಿತಿ ವತಿಯಿಂದ ಪ್ರಮುಖ ರಸ್ತೆ ಪ್ರಮುಖ ವೃತ್ತದಲ್ಲಿ ತೆರಳಿ ಬಂದ್ ಮಾಡಿಸಲು ಮುಂದಾಗುತ್ತೇವೆ ಎಂದು ತಿಳಿಸಿದರು.
ಶಾಲಾ, ಕಾಲೇಜಿಗೆ ರಜೆ: ಬಂದ್ ಹಿನ್ನಲೆ ಶಾಲಾ, ಕಾಲೇಜು ವಿದ್ಯಾರ್ಥಿಗಳ ಸುರಕ್ಷತಾ ದೃಷ್ಟಿಯಿಂದ ಒಂದು ದಿನ ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ, ಖಾಸಗಿ ವಿದ್ಯಾಸಂಸ್ಥೆಗಳನ್ನೊಳಗೊಂಡಂತೆ ಶಾಲಾ ಕಾಲೇಜಿಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಅವರು ಆದೇಶಿಸಿದ್ದಾರೆ. ಜೊತೆಗೆ ಹೆಚ್.ಡಿ ಕೋಟೆ ತಾಲೂಕಿನ ಕಬಿನಿ ಜಲಾಶಯದ ಸುತ್ತಮುತ್ತ ಇಂದು (ಸೆ.28) ಸಂಜೆ 5:00 ಗಂಟೆಯಿಂದ ನಾಳೆ ಸಂಜೆ 5:00 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಚಾಮರಾಜನಗರದಲ್ಲೂ ಶಾಲೆಗೆ ರಜೆ: ನಾಳೆ ಕರ್ನಾಟಕ ಬಂದ್ ಹಿನ್ನೆಲೆ ಚಾಮರಾಜನಗರದಲ್ಲಿಯೂ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಆದೇಶ ಹೊರಡಿಸಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಜೆ ನೀಡಿದ್ದಾರೆ.
ಇದನ್ನೂ ಓದಿ : ಕಾವೇರಿಗಾಗಿ ನಾಳೆ ಕರ್ನಾಟಕ ಬಂದ್.. ಶಿವಣ್ಣ ನೇತೃತ್ವದಲ್ಲಿ ಕನ್ನಡ ಚಿತ್ರರಂಗದಿಂದ ಹೋರಾಟಕ್ಕೆ ಬೆಂಬಲ