ಮೈಸೂರು: ರಸ್ತೆ ಅಪಘಾತದಿಂದ ಗಂಭೀರವಾಗಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿದ್ದ ನಗರದ ಯುವಕನೋರ್ವನ ಅಂಗಾಂಗವನ್ನು ಆತನ ಕುಟುಂಬಸ್ಥರು ದಾನ ಮಾಡಿದ್ದು, ನಾಲ್ವರ ಜೀವ ಉಳಿಸಲು ಸಹಕಾರಿಯಾಗಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಗಣಂಗೂರು ಗ್ರಾಮದ ಚಂದ್ರಶೇಖರ್ (28) ಡಿ.14 ರಂದು ಮೈಸೂರಿಗೆ ಬರುವಾಗ ರಸ್ತೆ ಅಪಘಾತದಿಂದ ಗಂಭೀರವಾಗಿ ಗಾಯಗೊಂಡಿದ್ದರು. ಇವರನ್ನು ಚಿಕಿತ್ಸೆಗಾಗಿ ಮೈಸೂರಿನ ಕುವೆಂಪುನಗರದಲ್ಲಿರುವ ಅಪೋಲೋ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ತೀವ್ರ ಗಾಯಗೊಂಡಿದ್ದ ಚಂದ್ರಶೇಖರ್ ಅವರನ್ನು ಉಳಿಸಿಕೊಳ್ಳಬೇಕೆಂದು ಆಸ್ಪತ್ರೆಯ ವೈದ್ಯರು ಕೂಡ 24 ಗಂಟೆಗಳ ಕಾಲ ಸತತ ಚಿಕಿತ್ಸೆ ನೀಡಿದರೂ ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಅಂಗಾಂಗ ಕಸಿ ಕಾಯ್ದೆ 2004ರಲ್ಲಿನ ನಿಯಮಾವಳಿಗಳಂತೆ ವಿವಿಧ ಹಂತಗಳಲ್ಲಿ ಪರೀಕ್ಷೆಗಳನ್ನು ನಡೆಸಿದ ವೈದ್ಯರು, ಚಂದ್ರಶೇಖರ್ ಅವರ ಮೆದುಳು ನಿಷ್ಕ್ರಿಯವಾಗಿದೆ ಎಂದು ಡಿ. 16 ರಂದು ಘೋಷಿಸಿದ್ದರು.
ಚಂದ್ರಶೇಖರ್ ಅವರ ಪೋಷಕರೊಂದಿಗೆ ಆಸ್ಪತ್ರೆ ಆಡಳಿತ ಮಂಡಳಿ ಸಮಾಲೋಚನೆ ನಡೆಸಿ ಅಂಗಾಂಗ ದಾನಕ್ಕೆ ಸಮ್ಮತಿ ಪಡೆದರು. ಇಂದು ಬೆಳಗ್ಗೆ 7 ಗಂಟೆಗೆ ಅಂಗಾಂಗಳನ್ನು ಹೊರತೆಗೆಯಲಾಯಿತು. ಗ್ರೀನ್ ಕಾರಿಡಾರ್ ಹಾಗೂ ಶೂನ್ಯ ಸಂಚಾರದ ಮೂಲಕ ವಿವಿಧ ಆಸ್ಪತ್ರೆಗಳಿಗೆ ಅಂಗಾಂಗಗಳನ್ನು ರವಾನಿಸಲಾಗಿದೆ. ಅಪೋಲೋ ಬಿಜಿಎಸ್ ಆಸ್ಪತ್ರೆಯಲ್ಲಿ ಕಿಡ್ನಿ ಹಾಗೂ ಲಿವರ್ ಇರಿಸಿಕೊಂಡು ಉಳಿದಂತೆ ಬೆಂಗಳೂರಿನ ರಾಮಯ್ಯ ಆಸ್ಪತ್ರೆಗೆ ಹೃದಯ, ಎನ್ಯು ಆಸ್ಪತ್ರೆಗೆ ಕಿಡ್ನಿ ನೀಡಲಾಯಿತು ಎಂದು ಆಸ್ಪತ್ರೆಯ ವೈದ್ಯಕೀಯ ಸೇವೆಗಳ ವ್ಯವಸ್ಥಾಪಕ ಸಿ.ಬಿ. ದಕ್ಷ ಮಾಹಿತಿ ನೀಡಿದ್ದಾರೆ.