ಮೈಸೂರು: ಮೈಸೂರಿನಲ್ಲಿ ಮೇ 4ರವರಗೆ ಅಗತ್ಯ ಸೇವೆಗಳನ್ನ ಬಿಟ್ಟು ಉಳಿದೆಲ್ಲ ಅಂಗಡಿಗಳು ಬಂದ್ ಮಾಡುವಂತೆ ವ್ಯಾಪಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಡಿಸಿಪಿ ಡಾ.ಪ್ರಕಾಶಗೌಡ ತಿಳಿಸಿದರು.
ತಮ್ಮ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ ಕೋವಿಡ್ ಹೆಚ್ಚಳವಾಗಿತ್ತಿರುವ ಹಿನ್ನೆಲೆ ,ಮೇ 4ರ ವರಗೆ ಸ್ವಯಂ ಪ್ರೇರಿತವಾಗಿ ಬಂದ್ ಮಾಡುವಂತೆ ವ್ಯಾಪಾರಿಗಳಿಗೆ ಪೊಲೀಸ್ ಇಲಾಖೆಯಿಂದ ಸೂಚನೆ ನೀಡಲಾಗಿದೆ. ಪೊಲೀಸ್ ಇಲಾಖೆಯ ಮನವಿ ಮೇರೆಗೆ ಮೈಸೂರಿನ ಕಮರ್ಷಿಯಲ್ ಸ್ಟ್ರೀಟ್ನ ಅಂಗಡಿಗಳು ಬಂದ್ ಆಗಿವೆ ಎಂದರು.
ಶನಿವಾರ - ಭಾನುವಾರ ಎರಡು ದಿನಗಳು ಮಾತ್ರ ವೀಕೆಂಡ್ ಕರ್ಫ್ಯೂ ಇದೆ. ಮೆಡಿಕಲ್, ಮಾಂಸದಂಗಡಿ, ತರಕಾರಿ, ಹಣ್ಣು ಖರೀದಿಸುವವರಿಗೆ ಮಾತ್ರ ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಕಾಲಾವಕಾಶವಿದೆ. ಮಾಂಸ ಮಾರಾಟಗಾರರು ಅಗತ್ಯಕ್ಕೂ ಹೆಚ್ಚು ಮಾಂಸ ಮಾರಾಟಕ್ಕೆ ಮುಂದಾಗಬಾರದು. ಕೇವಲ ನಿಗದಿತ ಸಮಯಕ್ಕಾಗುವಷ್ಟು ಮಾಂಸ ಮಾರಾಟಕ್ಕೆ ಮುಂದಾಗಿ. ಅನಗತ್ಯ ಮಾಂಸ ಮಾರಾಟ ಮಾಡುವ ಮೂಲಕ ನಷ್ಟ ಅನುಭವಿಸದಿರಿ ಎಂದು ಸಲಹೆ ನೀಡಿದರು.
ಇನ್ನು ಹೇರ್ ಸಲೂನ್ , ಬ್ಯುಟಿ ಪಾರ್ಲರ್ ಗಳು ವೀಕೆಂಡ್ ಕರ್ಫ್ಯೂ ನಲ್ಲಿ ಕಾರ್ಯನಿರ್ವಹಿಸುವಂತಿಲ್ಲ. ಬಾರ್, ರೆಸ್ಟೋರೆಂಟ್, ಹೋಟೆಲ್ ಗಳಲ್ಲಿ ಪರ್ಸಲ್ ಕಡ್ಡಾಯ ಎಂದು ಸೂಚನೆ ನೀಡಿದರು.