ಮೈಸೂರು: ಟಿಪ್ಪುವಿನ ವಿಚಾರದಲ್ಲಿ ಮುಸಲ್ಮಾನರನ್ನು ದ್ವೇಷಿಸಲಾಗುತ್ತಿದೆ. ನಾವು ಮಾಡುವ ಊಟ, ಹಾಕುವ ಬಟ್ಟೆ ಕುರಿತು ಟೀಕೆ ಮಾಡುತ್ತಿದ್ದಾರೆ. ಸರ್ಕಾರ ಇವೆಲ್ಲವನ್ನು ಬಿಟ್ಟು ಮೊದಲು ಸರಾಯಿ, ಜೂಜಾಟ ನಿಷೇಧ ಮಾಡಿ ಎಂದು ಶಾಸಕ ತನ್ವೀರ್ ಸೇಠ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇಂದು ನಗರದ ಬನ್ನಿ ಮಂಟಪದ ಅಪ್ನಾಗಾರ್ ನಲ್ಲಿ ಟಿಪ್ಪು ಜಯಂತಿ ಆಚರಣೆ ಕಾರ್ಯಕ್ರಮ ನಡೆದಿದ್ದು , ಕೋವಿಡ್ ಹಿನ್ನೆಲೆಯಲ್ಲಿ ಶಾಸಕ ತನ್ವೀರ್ ಸೇಠ್ ನೇತೃತ್ವದಲ್ಲಿ ಸರಳವಾಗಿ ಟಿಪ್ಪು ಜಯಂತಿ ಕಾರ್ಯಕ್ರಮ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ತನ್ವೀರ್ ಸೇಠ್, ಟಿಪ್ಪು ಜಯಂತಿ ವಿಚಾರದಲ್ಲಿ ರಾಜಕಾರಣ ಮಾಡಬಾರದು, ಟಿಪ್ಪು ವಿಚಾರದಲ್ಲಿ ಇತಿಹಾಸಕಾರರು ಸತ್ಯವನ್ನು ತಿರುಚುವ ಕೆಲಸ ಮಾಡಿದ್ದಾರೆ. ಇತಿಹಾಸ ತಿರುಚುವವರಿಗೆ ನಾವು ಗೌರವ ಕೊಡುವ ಅಗತ್ಯವಿಲ್ಲ. ನೂರಾರು ವರ್ಷಗಳಿಂದ ಅಭಿಮಾನಿಗಳು ಟಿಪ್ಪು ಜಯಂತಿಯನ್ನು ಆಚರಿಸಿಕೊಂಡು ಬಂದಿದ್ದಾರೆ. ಅವರ ಭಾವನೆಗಳಿಗೆ ನೋವುಂಟುಮಾಡುವ ಕೆಲಸ ಮಾಡಬಾರದು, ಸರ್ಕಾರ ಜನಪರ ಕೆಲಸ ಮಾಡದೇ ಟಿಪ್ಪು ಜಯಂತಿ ವಿಚಾರದಲ್ಲಿ ರಾಜಕಾರಣ ಮಾಡುತ್ತಿದೆ ಎಂದರು.
ಇನ್ನು ಸರ್ಕಾರ ಟಿಪ್ಪುವಿನ ವಿಚಾರದಲ್ಲಿ ಮುಸಲ್ಮಾನರನ್ನು ದ್ವೇಷ ಮಾಡುವ ಕೆಲಸ ಮಾಡುತ್ತಿದ್ದು , ನಾವು ಮಾಡುವ ಊಟ, ಬಟ್ಟೆಯಲ್ಲಿ ಟೀಕೆ ಮಾಡುತ್ತಾರೆ. ಸರ್ಕಾರಕ್ಕೆ ನಾಚಿಕೆಯಾಗಬೇಕು ಮೊದಲು ಸರಾಯಿ, ಜೂಜಾಟ ನಿಷೇಧ ಮಾಡಿ ಎಂದು ಶಾಸಕ ತನ್ವೀರ್ ಸೇಠ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.