ಮೈಸೂರು: ದಸರಾ, ನವರಾತ್ರಿ ರಂಗಿನಲ್ಲಿ ಚಿಣ್ಣರ, ಯುವಕ-ಯುವತಿಯರ ಸೆಲ್ಫಿ ಸ್ಪಾಟ್ ಎಂದೇ ಜನಜನಿತವಾಗಿದ್ದ, ಫಲಪುಷ್ಪ ಪ್ರದರ್ಶನದ ಮಕರಂದವನ್ನು ಈ ಬಾರಿ ಕೊರೊನಾ ಹೀರಿಕೊಂಡಿದೆ.
ಕೊರೊನಾ ಆರ್ಭಟದ ನಡುವೆ 15 ಕೋಟಿ ರೂ. ವೆಚ್ಚದಲ್ಲಿ ಚಾಮುಂಡಿ ಬೆಟ್ಟ ಹಾಗೂ ಅರಮನೆ ಆವರಣದಲ್ಲಿ ಮಾತ್ರ 'ಸರಳ ದಸರಾ' ಆಚರಣೆ ಮಾಡಲಾಗುತ್ತಿದೆ. ಆದರೆ ಸಾಮಾಜಿಕ ಅಂತರದಲ್ಲಿಯೇ ವೀಕ್ಷಣೆ ಮಾಡಬಹುದಾದ ಫಲಪುಷ್ಪ ಪ್ರದರ್ಶನಕ್ಕೆ ಈ ಬಾರಿ ಅವಕಾಶವಿಲ್ಲ.
ದಸರಾ ಮಹೋತ್ಸವ ಆರು ತಿಂಗಳು ಇರುವಾಗಲೇ ತೋಟಗಾರಿಕೆ ಇಲಾಖೆ ಆವರಣ ಹಾಗೂ ತೋಟಗಾರಿಕೆಯ ವಿವಿಧ ಶಾಖೆಗಳಲ್ಲಿ ಹೂ, ತರಕಾರಿ ಬೆಳೆಗಳನ್ನು ಬೆಳೆಯಲಾಗುತ್ತಿತ್ತು. ಇದರಿಂದ ನೌಕರರಿಗೆ ಲಕ್ಷಾಂತರ ಹೂಗಳನ್ನು ಜೋಪಾನ ಮಾಡುವುದೇ ಒಂದು ಸವಾಲಾಗಿತ್ತು. ಆದರೆ ಹೂ ಹಾಗೂ ತರಕಾರಿ ಗಿಡಗಳ ಬೆಳವಣಿಗೆಯ ಚಟುವಟಿಕೆಯನ್ನ ಕೈಬಿಟ್ಟಿದ್ದಾರೆ.
ತೋಟಗಾರಿಕೆ ಇಲಾಖೆಯಿಂದ ಬೆಳೆದ ಹೂ ಹಾಗೂ ತರಕಾರಿಗಳ ಮೂಲಕ ಕುಪ್ಪಣ್ಣ ಪಾಕ್೯ನಲ್ಲಿ ಫಲಪುಷ್ಪ ಪ್ರದರ್ಶನ ಹಾಗೂ ಗಾಜಿನ ಮನೆಯಲ್ಲಿ ಅಲಂಕೃತ ಗಿಡಗಳನ್ನು ಜೋಡಿಸಿ, ಪ್ರವಾಸಿಗರು ವ್ಹಾವ್ ಎನ್ನುವಂತೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ ಓಟ ವೇಗವಾಗಿರುವುದರಿಂದ ಆದಷ್ಟು ಸರಳವಾಗಿ ದಸರಾ ನಡೆಯಲಿದೆ.