ಮೈಸೂರು: ಪಿಎಫ್ಐ ಹಾಗೂ ಕಾಂಗ್ರೆಸ್ಗೆ ಯಾವುದೇ ವ್ಯತ್ಯಾಸವಿಲ್ಲ. ಇಬ್ಬರ ಚಿಂತನೆಗಳು ಒಂದೇ ರೀತಿಯಾಗಿವೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಕಿಡಿಕಾರಿದರು.
ಈ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ನವರಿಗೆ ಏನು ಗೊತ್ತಿದೆ ಎಂದು ಈ ರೀತಿ ಹೇಳುತ್ತಿದ್ದಾರೋ ಗೊತ್ತಿಲ್ಲ. ಅವರಿಗೆ ಕೇವಲ ಮುಸ್ಲಿಂರ ಮತ ಬೇಕಿದೆ. ಹಾಗಾಗಿ, ಹೀಗೆ ಮಾತನಾಡುತ್ತಿದ್ದಾರೆ ಎಂದು ಆರ್‌ಎಸ್ಎಸ್ ಬ್ಯಾನ್ ಮಾಡಬೇಕೆಂಬ ಕೈ ನಾಯಕರ ಹೇಳಿಕೆಗೆ ತಿರುಗೇಟು ನೀಡಿದರು.
ಇದನ್ನೂ ಓದಿ: ಸಿದ್ದರಾಮಯ್ಯ ಬಳಿ ಆರ್‌ಎಸ್ಎಸ್ ವಿರುದ್ಧ ಸಾಕ್ಷ್ಯಗಳಿದ್ದರೆ ಸರ್ಕಾರಕ್ಕೆ ನೀಡಲಿ: ಭೋಜೇಗೌಡ
ಆರ್‌ಎಸ್ಎಸ್ ದೇಶ ಭಕ್ತ ಸಂಘಟನೆ. ಆದರೆ, ಸರ್ಕಾರದಿಂದ ಯಾವುದೇ ಅನುದಾನ ಪಡೆಯುತ್ತಿಲ್ಲ. ಇಲ್ಲಿ ರಿಜಿಸ್ಟರ್ ಆಗಿದೆಯೋ ಇಲ್ಲವೋ ಅನ್ನೋದು ಮುಖ್ಯವಲ್ಲ. ದೇಶದ ಹಿತಕ್ಕಾಗಿ ಆರ್‌ಎಸ್ಎಸ್ ಕೆಲಸ ಮಾಡುತ್ತಿದೆ. ಆದರೆ ಪಿಎಫ್ಐ ದೇಶ ವಿರೋಧಿ ಕೆಲಸಗಳಲ್ಲಿ ಭಾಗಿಯಾಗಿದೆ. ಅದಕ್ಕೆ ಪೂರಕವಾಗಿ ಸಾಕ್ಷಿ ಸಿಕ್ಕಿರುವುದರಿಂದ ಪಿಎಫ್ಐ ಬ್ಯಾನ್ ಮಾಡಲಾಗಿದೆ. ಇಲ್ಲಿಯವರೆಗೆ ಪ್ರಧಾನಿ ಮೋದಿ, ಗೃಹ ಮಂತ್ರಿ ಅಮಿತ್ ಶಾ ಅವರು ತೆಗೆದುಕೊಂಡ ನಿರ್ಧಾರಗಳು ಸರಿಯಾಗಿವೆ ಎಂದು ಸಮರ್ಥಿಸಿಕೊಂಡರು.
ಇದನ್ನೂ ಓದಿ: ಬೆಂಗಳೂರು, ಬೆಳಗಾವಿಯಲ್ಲಿ ಪಿಎಫ್ಐ ಕಚೇರಿಗಳು ಬಂದ್: ಸೀಲ್, ಬೀಗಮುದ್ರೆ ಒತ್ತಿದ ಪೊಲೀಸರು
ಶಿಕ್ಷಕರ ನೇಮಕಾತಿ ಹಗರಣ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ನಾಗೇಶ್, ಕುಂಬಳಕಾಯಿ ಕಳ್ಳ ಅಂದರೆ ಇವರು ಯಾಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ. ಶಿಕ್ಷಕರ ನೇಮಕಾತಿ ಹಗರಣ ಕುರಿತು ಸಿಐಡಿಯವರು ಸಮಗ್ರ ತನಿಖೆ ನಡೆಸುತ್ತಿದ್ದಾರೆ. ತನಿಖೆಯಿಂದ ಎಲ್ಲವೂ ಗೊತ್ತಾಗುತ್ತದೆ. ಯಾರ ಕಾಲದಲ್ಲಿ ಏನೇನು ನಡೆದಿದೆ ಎನ್ನುವುದು ತಿಳಿಯಲಿದೆ. ಆಗ ಅಕ್ರಮ ಯಾರ ಕಾಲದ್ದು ಎಂದು ನಾನೇ ಅವರನ್ನು ಪ್ರಶ್ನೆ ಮಾಡುತ್ತೇನೆ ಎಂದರು.