ಮೈಸೂರು: ಎರಡು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ಯುವತಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಕೆ.ಆರ್. ನಗರ ತಾಲೂಕಿನ ಹಂಪಾಪುರ ಗ್ರಾಮದಲ್ಲಿ ನಡೆದಿದೆ.
ಕೆ.ಆರ್.ನಗರ ತಾಲೂಕಿನ ಹೊಸರಾಮನಹಳ್ಳಿ ನಿವಾಸಿ ಜ್ಯೋತಿ(24) ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಜ್ಯೋತಿಗೆ ಎರಡು ತಿಂಗಳ ಹಿಂದೆಯಷ್ಟೇ ಹಂಪಾಪುರ ಗ್ರಾಮದ ನಿವಾಸಿ ಉಮೇಶ್ ಎಂಬಾತನೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ವೃತ್ತಿಯಲ್ಲಿ ಚಾಲಕನಾಗಿರುವ ಈತ ಅನ್ಯೋನ್ಯವಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದ. ಆದರೆ ರಾತ್ರಿ ಪತ್ನಿ ನೇಣುಬಿಗಿದ ಸ್ಥಿತಿಯಲ್ಲಿದ್ದಾಳೆ ಎಂದು ಆಕೆಯ ಪೋಷಕರಿಗೆ ಕರೆ ಮಾಡಿದ್ದನಂತೆ. ಆದ್ರೆ ಜ್ಯೋತಿಯ ಪೋಷಕರು ಹಂಪಾಪುರ ಗ್ರಾಮಕ್ಕೆ ಹೋಗುತ್ತಿದ್ದಂತೆ ಉಮೇಶ್ ನಾಪತ್ತೆಯಾಗಿದ್ದಾನೆ. ಈ ಸಂಬಂಧ ಪೋಷಕರು ಕೊಲೆ ಶಂಕೆ ವ್ಯಕ್ತಪಡಿಸಿ, ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.