ಮೈಸೂರು: 2024ರ ಹೊಸ ವರ್ಷವನ್ನು ಸಾಂಸ್ಕೃತಿಕ ನಗರಿಯಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಗಿದೆ. ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆ ಮುಂಭಾಗ ರಾತ್ರಿ ಪೊಲೀಸ್ ಬ್ಯಾಂಡ್ ಜತೆಗೆ ಪರಿಸರಸ್ನೇಹಿ ಹಸಿರು ಪಟಾಕಿಗಳನ್ನು ಸಿಡಿಸಲಾಯಿತು.
ಇದಕ್ಕೂ ಮುನ್ನ, ಪೊಲೀಸ್ ಇಲಾಖೆಯಿಂದ ಕರ್ನಾಟಕ ಮತ್ತು ಆಂಗ್ಲ ಬ್ಯಾಂಡ್ ಸಂಗೀತೋತ್ಸವ ಏರ್ಪಡಿಸಲಾಗಿತ್ತು. ಮಧ್ಯರಾತ್ರಿ 12:15 ನಿಮಿಷಕ್ಕೆ ಅರಮನೆ ಮುಂಭಾಗದಲ್ಲಿ ಅರಮನೆ ಆಡಳಿತ ಮಂಡಳಿಯಿಂದ ಸಿಡಿಸಲಾದ ಬಣ್ಣ ಬಣ್ಣದ ಪಟಾಕಿಗಳು ವೀಕ್ಷಕರ ಮನಸೂರೆಗೊಂಡವು.
ದೇವಾಲಯಗಳಲ್ಲಿ ವಿಶೇಷ ಪೂಜೆ: ಇಂದು ನಾಡ ಅಧಿದೇವತೆ ಚಾಮುಂಡಿ ಬೆಟ್ಟಕ್ಕೆ ತೆರಳುತ್ತಿರುವ ಭಕ್ತರು ಬೆಳಿಗ್ಗಿನಿಂದಲೇ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ನಗರದ ವಿವಿಧ ದೇವಾಲಯಗಳಲ್ಲೂ ವಿಶೇಷ ಪೂಜೆಗಳು ನಡೆಯುತ್ತಿವೆ. ವಿಜಯನಗರದ ಯೋಗ ನರಸಿಂಹ ಸ್ವಾಮಿ ದೇವಾಲಯದಲ್ಲಿ ಹೊಸ ವರ್ಷದ ಹಿನ್ನೆಲೆಯಲ್ಲಿ ಬೆಳಿಗ್ಗಿನ ಜಾವ 4 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ 2 ಲಕ್ಷಕ್ಕೂ ಅಧಿಕ ತಿರುಪತಿ ಮಾದರಿಯ ಲಡ್ಡುಗಳನ್ನು ಭಕ್ತರಿಗೆ ವಿತರಿಸಲಾಗುತ್ತಿದೆ.
ಅರಮನೆ ಫಲಪುಷ್ಪ ಪ್ರದರ್ಶನಕ್ಕೆ ಇಂದು ತೆರೆ: ಕ್ರಿಸ್ಮಸ್ ಹಾಗೂ ಹೊಸ ವರ್ಷದ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿಯ ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿದೆ. ಇಂದು ಪ್ರವಾಸಿಗರು ಬಹುತೇಕ ವಾಪಸ್ ಆಗಲಿದ್ದು, ಕಳೆದ 10 ದಿನಗಳಿಂದ ಅರಮನೆಯ ಮುಂಭಾಗದ ಆವರಣದಲ್ಲಿ ಏರ್ಪಡಿಸಿದ್ದ ಮಾಗಿ ಉತ್ಸವದ ಫಲಪುಷ್ಪ ಪ್ರದರ್ಶನವೂ ಮುಕ್ತಾಯವಾಗಲಿದೆ. 10 ದಿನಗಳಲ್ಲಿ 5 ಲಕ್ಷಕ್ಕೂ ಅಧಿಕ ಪ್ರವಾಸಿಗರು ಫಲಪುಷ್ಪ ಪ್ರದರ್ಶನ ವೀಕ್ಷಣೆ ಮಾಡಿದ್ದಾರೆ ಎಂದು ಅರಮನೆ ಆಡಳಿತ ಮಂಡಳಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮಲೆನಾಡಿನಲ್ಲಿ ಹೊಸ ವರ್ಷದ ಸಂಭ್ರಮ: ವಿಡಿಯೋ
ಪ್ರಪಂಚದೆಲ್ಲೆಡೆ ಹೊಸವರ್ಷವನ್ನು ಹೊಸ ಭರವಸೆಯಿಂದ ಬರಮಾಡಿಕೊಳ್ಳಲಾಗಿದೆ. ರಾಜ್ಯದಲ್ಲೂ ವಿವಿಧಡೆ ಜನತೆ ಸಂಭ್ರಮದಲ್ಲಿ ಮಿಂದೆದ್ದರು. ದಾವಣಗೆರೆಯಲ್ಲಿ ರಾತ್ರಿ 12 ಗಂಟೆಗೆ ಕೇಕ್ ಕಟ್ ಮಾಡಿ ಡಿಜೆ ಹಾಡುಗಳಿಗೆ ಜನರು ಕುಣಿದು ಕುಪ್ಪಳಿಸಿದರು. ಶಿವಮೊಗ್ಗದಲ್ಲೂ ಜನ 2023ಕ್ಕೆ ಬೈಬೈ ಹೇಳಿ 2024 ಅನ್ನು ಸ್ವಾಗತಿಸಿದ್ದಾರೆ. ವಿವಿಧ ಕ್ಲಬ್, ರೆಸಾರ್ಟ್‌ಗಳಲ್ಲಿ ಡಿಜೆ ಸೇರಿದಂತೆ ವಿವಿಧ ರಸಮಂಜರಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಹಾವೇರಿಯಲ್ಲಿ ಹೊಸ ವರ್ಷದ ಸ್ವಾಗತಕ್ಕಾಗಿ ಬೇಕರಿ ಅಂಗಡಿಗಳಲ್ಲಿ ತರಹೇವಾರಿ ಕೇಕ್ಗಳನ್ನು ಮಾರಾಟಕ್ಕಿಲಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ರಾಜ್ಯ ಪೊಲೀಸ್ ಇಲಾಖೆ ಭದ್ರತೆ ಒದಗಿಸಿದೆ.