ಮೈಸೂರು : ಬರುವ ಜೂನ್ 21ರಂದು ಅರಮನೆ ಆವರಣದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯೊಂದಿಗೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಅವಕಾಶ ನೀಡಬೇಕೆಂದು ಆಗ್ರಹಿಸಿ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದ್ದಾರೆ.
ಪ್ರಧಾನಿ ಮೋದಿ ಜೊತೆ ವೇದಿಕೆಯಲ್ಲಿ ಮುಖ್ಯಮಂತ್ರಿ, ರಾಜ್ಯಪಾಲರು, ಕೇಂದ್ರ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾತ್ರ ಅವಕಾಶ ಇರಲಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ ಹಿನ್ನೆಲೆ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ನಮ್ಮ ಮೈಸೂರು, ನಮ್ಮ ಹೆಮ್ಮೆ ನಮ್ಮ ಮಹಾರಾಜರು' ಹೆಸರಿನಲ್ಲಿ ಅಭಿಯಾನ ನಡೆಯುತ್ತಿದೆ.
ಆಧುನಿಕ ಯೋಗ ಜಗದ್ವಿಖ್ಯಾತಿಯಾಗಲು ಮೈಸೂರು ಅರಸರ ಕೊಡುಗೆ ಇದೆ. ರಾಜವಂಶಸ್ಥರನ್ನ ಆಹ್ವಾನಿಸದಿರುವುದು ಸರಿಯಲ್ಲ, ನಮಗೆ ಯದುವೀರ ಅವರು ಇಲ್ಲದ ಯೋಗ ದಿನವೇ ಬೇಡ, ಮೈಸೂರಿನವರೇ ಇಲ್ಲದ ವೇದಿಕೆಯ ಕಾರ್ಯಕ್ರಮ ನಮಗೇಕೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಮೋದಿ ಯೋಗ ಕಾರ್ಯಕ್ರಮವನ್ನು ಜಗತ್ತೇ ವೀಕ್ಷಿಸುತ್ತದೆ. ಆದರೆ, ರಾಜವಂಶಸ್ಥರಿಗೆ ಈವರೆಗೂ ಆಹ್ವಾನ ನೀಡಿಲ್ಲ. ಅರಮನೆಯು ಅರಸರ ಕೊಡುಗೆ, ಯೋಗ ಶಾಲೆಯನ್ನು ಆರಂಭಿಸಿದ್ದೆ ಮಹಾರಾಜರು ಎಂಬುದನ್ನು ಸಂಬಂಧಪಟ್ಟವರು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಲೇಖಕಿ ಲಕ್ಷ್ಮಿ ಕಿಶೋರ್ ಅರಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ಅಭಿವೃದ್ಧಿಗೆ ಮಹಾರಾಜರ ಕೊಡುಗೆ ಅನನ್ಯ, ಯದುವೀರ ಅವರನ್ನ ಆಹ್ವಾನಿಸದಿರುವುದು ಮೈಸೂರಿಗರಿಗೆ ನೋವುಂಟು ಮಾಡಿದೆ. ಮೈಸೂರಿನ ಜನ ಕಾರ್ಯಕ್ರಮದ ದಿನ ಪ್ರತಿಭಟನೆ ನಡೆಸಲಿದ್ದಾರೆ ಎಂದು ರಾಜ್ಯ ಒಕ್ಕಲಿಗ ವಿಕಾಸ ವೇದಿಕೆ ಅಧ್ಯಕ್ಷೆ ಯಮುನಾ ಕಿಡಿಕಾರಿದ್ದಾರೆ.
ಇದನ್ನೂ ಓದಿ: ನೂತನ ಲೋಕಾಯುಕ್ತರಾಗಿ ನ್ಯಾ. ಬಿ.ಎಸ್ ಪಾಟೀಲ್ ಪ್ರಮಾಣ ವಚನ ಸ್ವೀಕಾರ