ಮೈಸೂರು: ಶಕ್ತಿ ದೇವತೆಗಳನ್ನು ಗೊಂಬೆಗಳ ರೂಪದಲ್ಲಿ ಇಟ್ಟು ನವರಾತ್ರಿಯ ಸಂದರ್ಭದಲ್ಲಿ ಪೂಜೆ ಮಾಡಿದರೆ ಒಳಿತಾಗುತ್ತದೆ ಎಂಬ ನಂಬಿಕೆ ಸಾಂಸ್ಕೃತಿಕ ನಗರಿಯ ಪ್ರತಿ ಮನೆ ಮನೆಗಳಲ್ಲಿಯೂ ಇರುವುದರಿಂದ ಈ ಸಂಪ್ರದಾಯವನ್ನು ಇಂದಿಗೂ ಪಾಲಿಸಲಾಗುತ್ತಿದೆ.
ಈ ಗೊಂಬೆ ಪೂಜೆಯಿಂದ ಬಹುಮುಖ್ಯವಾಗಿ ಮುಂದಿನ ಪೀಳಿಗೆಯ ಮಕ್ಕಳಿಗೆ ನಮ್ಮ ಸಂಪ್ರದಾಯಗಳು, ಆಚರಣೆಗಳು, ಧಾರ್ಮಿಕ ವಿಧಿ - ವಿಧಾನಗಳನ್ನು ಕಲಿಸುವ ಉದ್ದೇಶದಿಂದಲೂ ಸಂಜೆ ವೇಳೆ ಮನೆಯ ಹಿರಿಯರು ಗೊಂಬೆ ತೋರಿಸಿ ಇತಿಹಾಸ ಅರ್ಥೈಸಲು ಈ ಪೂಜೆಯನ್ನು ಮುಂದುವರೆಸುತ್ತಿದ್ದಾರೆ.
ಅರಮನೆಯಲ್ಲೂ ಗೊಂಬೆ ಪೂಜೆ
ಗೊಂಬೆ ಇಟ್ಟು ಪೂಜೆ ಮಾಡುವ ಸಂಪ್ರದಾಯವನ್ನು ಜಾರಿಗೆ ತಂದಂತಹ ಕೀರ್ತಿ ಮೈಸೂರನ್ನು ಆಳಿದ ರಾಜಮನೆತನಕ್ಕೆ ಸೇರುತ್ತದೆ. ಇಂದಿಗೂ ಕೂಡ ಪರಂಪರೆಯಂತೆ ಅರಮನೆಯಲ್ಲಿ ಗೊಂಬೆ ಕೂರಿಸುವುದನ್ನು ಪಾಲಿಸುತ್ತಾ ಬಂದಿದ್ದು, ಹಿಂದಿನ ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ನವರಾತ್ರಿಯ ಸಂದರ್ಭದಲ್ಲಿ ವಿವಿಧ ಶಕ್ತಿ ದೇವತೆಗಳ ಅವತಾರಗಳನ್ನು ಗೊಂಬೆ ರೂಪದಲ್ಲಿ ಇಟ್ಟು ಪೂಜೆ ಸಲ್ಲಿಸುತ್ತಿದ್ದರು. ಇಂದಿಗೂ ಸಹ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಗೊಂಬೆ ಪೂಜೆಯನ್ನು 9 ದಿನಗಳ ಕಾಲ ಆಚರಿಸುತ್ತಾರೆ.
ಮನೆ ಮನೆಗಳಲ್ಲೂ ಗೊಂಬೆ ಪೂಜೆ
ದಸರಾ ಸಂದರ್ಭದಲ್ಲಿ ಮೈಸೂರಿನ ಪ್ರತಿಯೊಂದು ಮನೆಗಳಲ್ಲೂ 9 ದಿನಗಳ ಕಾಲ ಶಕ್ತಿ ದೇವತೆಗಳ ವಿವಿಧ ಅವತಾರದ ಗೊಂಬೆಗಳನ್ನು ಇಟ್ಟು, ತಮ್ಮ ಸ್ನೇಹಿತರು ಹಾಗೂ ಕುಟುಂಬಸ್ಥರು ಸೇರಿ ಸಿಹಿ ತಿಂಡಿಗಳನ್ನು ಮಾಡಿ ನವರಾತ್ರಿ ಆಚರಿಸುತ್ತಾರೆ. ಆದರೆ ಈ ಬಾರಿ ಕೊರೊನಾ ಹಿನ್ನೆಲೆ ಮನೆಗಳಲ್ಲೇ ಸರಳವಾಗಿ ಗೊಂಬೆ ಪೂಜೆ ಆಚರಿಸಲಾಗುತ್ತಿದೆ.