ಮೈಸೂರು : ಮುಖ್ಯಮಂತ್ರಿ ಯಡಿಯೂರಪ್ಪ ಪೂರ್ಣಾವಧಿಗೆ ಆಯ್ಕೆಯಾಗಿದ್ದಾರೆ, ಇದು ಇವತ್ತಿನ ವಾಸ್ತವ. ಆದರೆ, ಭವಿಷ್ಯದ ಬಗ್ಗೆ ನನಗೆ ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಶಾಸಕ ಸಿ ಟಿ ರವಿ ಉತ್ತರಿಸಿದರು.
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಕಳೆದ ಒಂದು ವಾರದಿಂದ ರಾಜ್ಯ ಬಿಜೆಪಿಯಲ್ಲಿ ಏನಾಗುತ್ತಿದೆ ಎಂಬ ಮಾಧ್ಯಮ ಪ್ರಶ್ನೆಗೆ, 7ವರ್ಷ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದ ಸಂಭ್ರಮವನ್ನು ಆಚರಣೆ ಮಾಡಲಿಲ್ಲ. ಅದರ ಬದಲಿಗೆ ಸಾಮಾಜಿಕ ಕೆಲಸಗಳನ್ನು ಕೈಗೊಳ್ಳಲಾಯಿತು ಎಂದ್ರು.
ಇನ್ನು, ವಿಜಯೇಂದ್ರ ದಿಢೀರನೆ ದೆಹಲಿಗೆ ಯಾವ ಕಾರಣಕ್ಕೆ ಹೋದರು ಎಂಬುದನ್ನು ನಾನು ಹೇಳಲು ಬರುವುದಿಲ್ಲ, ದೆಹಲಿಯಲ್ಲಿ ಪಕ್ಷದ ಯಾವ ಸಭೆಯೂ ಇಲ್ಲ, ವೈಯಕ್ತಿಕ ಕೆಲಸಕ್ಕಾಗಿ ಹೋಗಿರಬಹುದು. ಇದರ ಬಗ್ಗೆ ನನಗೆ ಗೊತ್ತಿಲ್ಲ ಮತ್ತು ಸಂಬಂಧವಿಲ್ಲ ಎಂದರು.
ಕಾಂಗ್ರೆಸ್ ಟೂಲ್ ಕಿಟ್, ಬೆಡ್ ಬ್ಲಾಕಿಂಗ್, ಹೆಣದ ವೈಭವೀಕರಣ ಮೂಲಕ ಅರಾಜಕತೆ ಸೃಷ್ಟಿಸಿ ಪ್ರಚಾರ ಪಡೆಯುತ್ತಿದೆ. ಈ ಮೂಲಕ ಪ್ರಧಾನಿ ವ್ಯಕ್ತಿತ್ವಕ್ಕೆ ಮಸಿ ಬಳೆಯುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕೋವಿಡ್ನಿಂದ ಸತ್ತ ವ್ಯಕ್ತಿಗಳ ಸಾವಿನ ಸಂಖ್ಯೆಯನ್ನು ರಾಜ್ಯ ಮತ್ತು ಮೈಸೂರಿನಲ್ಲಿ ಮುಚ್ಚಿಡಲಾಗುತ್ತಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಇದರ ಬಗ್ಗೆ ತನಿಖೆಯಾಗಬೇಕು, ಸಾವಿನ ಸಂಖ್ಯೆಯನ್ನು ಮುಚ್ಚಿಟ್ಟು ಏನು ಪ್ರಯೋಜನ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.