ಮೈಸೂರು: ಅರಮನೆಗೆ ಆಗಮಿಸುವ ಪ್ರವಾಸಿಗರಿಗೆ ಮೈಸೂರು ಪಾಕ್ ನೀಡುವ ಮೂಲಕ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 135ನೇ ಜಯಂತಿಯನ್ನು ವಿಶಿಷ್ಟವಾಗಿ ಅಚರಿಸಲಾಯಿತು.
ಮೈಸೂರಿನ ಪ್ರಸಿದ್ಧ ರಾಜರಾಗಿದ್ದ ರಾಜ ಋಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 135ನೇ ಜಯಂತಿಯನ್ನು ಅರಮನೆಯ ಆಡಳಿತ ಮಂಡಳಿ ಹಾಗೂ ವಿವಿಧ ಸಂಘಟನೆಯ ಮುಖಂಡರು ಪ್ರವಾಸಿಗರಿಗೆ ವರಾಹ ದೇವಸ್ಥಾನದ ಮುಂಭಾಗದಲ್ಲಿ ಮೈಸೂರು ಪಾಕ್ ವಿತರಿಸಿದರು.
ಈ ಮೈಸೂರು ಪಾಕ್ ಸಿಹಿಯನ್ನು ಮೈಸೂರಿಗೆ ಪರಿಚಯಿಸಿದ್ದು, ರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್. ಹಾಗಾಗಿ ಅವರ ಜನ್ಮದಿನದಂದು ಮೈಸೂರು ಪಾಕ್ ಹಂಚಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ವಿವಿಧ ಸಂಘಟನೆಯ ಮುಖಂಡರು ಮೈಸೂರು ನಗರದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜೀವನ ಚರಿತ್ರೆಯನ್ನು ಶಾಲಾ ಪಠ್ಯ ಪುಸ್ತಕದಲ್ಲಿ ಅಳವಡಿಸಬೇಕೆಂದು ಆಗ್ರಹಿಸಿದರು.