ಮೈಸೂರು: ಜೆಡಿಎಸ್ನವರು ಹಣದ ಮೇಲೆ ರಾಜಕೀಯ ಮಾಡುವವರು. ಇದು ಅವರ ಸಂಸ್ಕೃತಿ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿರುಗೇಟು ನೀಡಿದ್ದಾರೆ.
ಇಂದು ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ವಸೂಲಿಗೆ ಬಂದವರು ಎಂಬ ಹೆಚ್ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿದರು. ಅರುಣ್ ಸಿಂಗ್ ಸೂಟ್ ಕೇಸ್ ತೆಗೆದುಕೊಳ್ಳಲು ಬಂದವರು ಎಂಬುದು ನಮಗಲ್ಲ, ಅದು ಜೆಡಿಎಸ್ ಸಂಸ್ಕೃತಿ. ಜೆಡಿಎಸ್ನವರು ರಾಜ್ಯ ಆಳಿದವರು, ದೇಶ ಆಳಿದವರು. ಅವರಿಗೆ ಎಲುಬು, ನಾಲಿಗೆ ಇದ್ದಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ವ್ಯಂಗ್ಯವಾಡಿದರು.
ನಿರಂತರವಾದ ಬೆಲೆ ಏರಿಕೆ ಕುರಿತು ಪ್ರತಿಕ್ರಿಯಿಸಿ, ಯುಪಿಎ ಕಾಲಘಟ್ಟದ ಬೆಲೆ ಏರಿಕೆಯೇ ಇಂದಿನ ಬೆಲೆ ಏರಿಕೆ. ಬೆಲೆ ಏರಿಕೆ ನಿಯಂತ್ರಣಕ್ಕೆ ನಮ್ಮ ಸರ್ಕಾರ ಸಂಪೂರ್ಣವಾಗಿ ಸಿದ್ಧವಿದೆ, ಅದಕ್ಕಾಗಿ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರವಾಗಿ ಮಾತನಾಡಿ, ನಮ್ಮ ನೆಲ, ನಮ್ಮ ಜಲ, ನಮ್ಮ ಭಾಷೆಗೆ ಕಟಿಬದ್ಧವಾಗಿ ಭಾರತೀಯ ಜನತಾ ಪಾರ್ಟಿ ಇದೆ ಎಂದರು.
ಬಿಜೆಪಿಯವರು ನಮ್ಮ ಮನೆ ಬಾಗಿಲಿಗೆ ಬಂದಿದ್ದಾರೆ ಎಂಬ ಹೇಳಿಕೆ ಪ್ರತಿಕ್ರಿಯೆ ನೀಡಿ, ಜೆಡಿಎಸ್ನಂತೆ ಭಾರತೀಯ ಜನತಾ ಪಾರ್ಟಿ ಮಾತನಾಡುವುದಿಲ್ಲ. ಜೆಡಿಎಸ್ ಪರಿಸ್ಥಿತಿ ಏನು ಎಂಬುದು ರಾಜ್ಯದ ಜನತೆಗೆ ಗೊತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಇದನ್ನೂ ಓದಿ:ಕಾಂಗ್ರೆಸ್ ಜಾರಿಗೆ ತಂದ ಯೋಜನೆಗಳನ್ನು ಖಾಸಗೀಕರಣಗೊಳಿಸಿದ್ದೇ ಬಿಜೆಪಿಯ ಸಾಧನೆ: ಸಚಿನ್ ಪೈಲಟ್