ಮೈಸೂರು : ಸರಳ ದಸರಾ ಮಾಡುವ ಮೂಲಕ ಸರ್ಕಾರದ ಹಣ ಉಳಿಸಿದ್ದೀವಿ ಎಂದು ಜಿಲ್ಲಾಡಳಿತ ಅಂದುಕೊಂಡಿದೆ. ಆದರೆ, ಇಂದು ಸಚಿವ ಎಸ್.ಟಿ.ಸೋಮಶೇಖರ್ ತೋರಿಸಿದ ದಸರಾ ಲೆಕ್ಕಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊರೊನಾ ಹಿನ್ನೆಲೆ ರಾಜ್ಯ ಸರ್ಕಾರ ಈ ಬಾರಿಯ ದಸರಾವನ್ನು ಸರಳವಾಗಿ ಆಚರಿಸಿತ್ತು. ಆದರೆ, ಚಾಮುಂಡೇಶ್ವರಿ ಬೆಟ್ಟ ಹಾಗೂ ಅರಮನೆಯ ಆವರಣಕ್ಕೆ ಮಾತ್ರ ಸೀಮಿತವಾದ ಕಾರ್ಯಕ್ರಮಗಳಿಗೆ 2,91,83,167 ರೂ. ಖರ್ಚಿನ ಲೆಕ್ಕವನ್ನು ಜಿಲ್ಲಾಡಳಿತ ತೋರಿಸಿದೆ. ಹತ್ತು ದಿನಗಳ ಸರಳ ಕಾರ್ಯಕ್ರಮಕ್ಕೆ ಇಷ್ಟು ಹಣ ಬೇಕಾಗಿತ್ತೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಸರಳ ದಸರಾವಾಗಿದ್ದರಿಂದ ಅಭಿಮನ್ಯು, ಗೋಪಿ, ವಿಕ್ರಮ, ಕಾವೇರಿ, ವಿಜಯ ಆನೆಗಳನ್ನು ಮಾತ್ರ ಅರಮನೆಗೆ ಕರೆ ತರಲಾಗಿತ್ತು. ಆರಂಭದ ದಿನಗಳಲ್ಲಿ ಅರಮನೆಯಲ್ಲಿ ಆನೆಗಳಿಗೆ ಆಹಾರ ಪೂರೈಕೆಗೆ ಟೆಂಡರ್‌ದಾರರು ಬಾರದೇ ಇದ್ದ ಕಾರಣ, ಮೃಗಾಲಯದಿಂದ ಆಹಾರ ತರಿಸಿ ನೀಡಲಾಗುತ್ತಿತ್ತು.
ಆದರೆ, 25 ದಿನಗಳಿಗೆ ಐದು ಆನೆಗಳ ಖರ್ಚು ಎಂದು 35 ಲಕ್ಷ ರೂ. ಬಿಲ್ ಮಾಡಲಾಗಿದೆ. ಐದು ಆನೆಗಳ ನಿರ್ವಹಣೆಗೆ ಇಷ್ಟೊಂದು ಹಣ ಬೇಕಾ ಎನ್ನುವ ಅನುಮಾನ ಸಾರ್ವಜನಿಕರಲ್ಲಿ ಕಾಡತೊಡಗಿದೆ.
ಅಲ್ಲದೆ, ಕೊರೊನಾ ವಾರಿಯರ್ಸ್ಗೆ ನೀಡಲಾಗುವ ಪ್ರಮಾಣ ಪತ್ರ ಮುದ್ರಣಕ್ಕೆ ₹8,496, ರಾಜವಂಶಸ್ಥರಿಗೆ ಗೌರವಧನ 40 ಲಕ್ಷ ರೂ. (ಕಳೆದ ವರ್ಷ 25 ಲಕ್ಷ ರೂ.), ಸ್ವಾಗತ ಸಮಿತಿಗೆ 1,80,500 ರೂ. ಹೀಗೆ ಜಿಲ್ಲಾಡಳಿತ ಕೊಟ್ಟಿರುವ ಹಲವು ಲೆಕ್ಕಗಳು ತಾಳೆ ಆಗುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.