ಮೈಸೂರು: ಮೈಸೂರು ಭೂ ಅಕ್ರಮ ತನಿಖೆಯನ್ನು ಜಿಲ್ಲಾಧಿಕಾರಿ ನೇತೃತ್ವದಲ್ಲೇ ನಡೆಸುವಂತೆ ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ಅಲ್ಲದೇ, ಸರ್ವೇ ಆಯುಕ್ತರ ಆದೇಶವನ್ನು ಕಂದಾಯ ಇಲಾಖೆ ಹಿಂದಕ್ಕೆ ಪಡೆದಿದೆ.

ಕೇರ್ಗಳ್ಳಿ, ಯಡಹಳ್ಳಿ, ಲಿಂಗಾಂಬುದಿಪಾಳ್ಯ, ದಟ್ಟಗಳ್ಳಿಯ ವಿವಿಧ ಜಮೀನುಗಳ ಭೂ ಅಕ್ರಮದ ಸಮಗ್ರ ತನಿಖೆಗೆ ಕಂದಾಯ ಇಲಾಖೆ ತಿಳಿಸಿದೆ. ಸಾರಾ ಚೌಲ್ಟ್ರಿ ಸೇರಿ ವಿವಿಧ ಸರ್ವೇ ನಂಬರ್ ಜಮೀನುಗಳ ತನಿಖೆ ಹಾಗೂ ತನಿಖಾ ತಂಡ ರಚಿಸುವಂತೆ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ.
ಈ ಕುರಿತು ತುರ್ತಾಗಿ ತನಿಖೆ ನಡೆಸಿ ಮೂರು ವಾರದೊಳಗೆ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸರ್ವೇ ಇಲಾಖೆ ಒಂದರಿಂದಲೇ ತನಿಖೆ ನಡೆಸಲು ಸಾಧ್ಯವಿಲ್ಲ, ಸಮಗ್ರ ತನಿಖೆಗೆ ಕಂದಾಯ, ಸರ್ವೇ ಇಲಾಖೆ, ಮೂಡಾದ ಜಂಟಿ ತಂಡದ ಅಗತ್ಯವಿದೆ ಎಂದು ಉಲ್ಲೇಖಿಸಲಾಗಿದೆ.
ಹೀಗಾಗಿ, ಮನೀಶ್ ಮೌದ್ಗಿಲ್ ಹೊರಡಿಸಿದ ಆದೇಶವನ್ನು ಕಂದಾಯ ಇಲಾಖೆ ಪಡೆದಿದೆ. ಆರ್ಟಿಐ ಕಾರ್ಯಕರ್ತ ಗಂಗರಾಜು ನೀಡಿದ ದೂರು ಉಲ್ಲೇಖಿಸಿ, ಕಂದಾಯ ಇಲಾಖೆ ಉಪ ಕಾರ್ಯದರ್ಶಿ ಎಂ.ಇ.ಚನ್ನಬಸವರಾಜ ಆದೇಶ ಹೊರಡಿಸಿದ್ದಾರೆ.
ಆದೇಶದ ಹಿನ್ನೆಲೆ:
ಶಾಸಕ ಸಾ.ರಾ ಮಹೇಶ್ ಭೂ ಅಕ್ರಮದ ಬಗ್ಗೆ ಪ್ರಾದೇಶಿಕ ಆಯುಕ್ತರ ನಂತರವೂ ಮರು ತನಿಖೆ ಮಾಡುವಂತೆ ಸರ್ವೆ ಇಲಾಖೆ ಆಯುಕ್ತ ಮನೀಶ್ ಮೌದ್ಗಿಲ್ ಆದೇಶ ಹೊರಡಿಸಿದ್ದರು. ಭೂದಾಖಲೆಗಳ ಉಪನಿರ್ದೇಶಕರಾದ ಮಂಡ್ಯದ ಬಿ.ಜಿ ಉಮೇಶ್, ತುಮಕೂರಿನ ಸುಜಯ್ ಕುಮಾರ್, ದಾವಣಗೆರೆಯ ಟಿ.ಕೆ ಲೋಹಿತ್ ನೇಮಕ ಮಾಡಿ 10 ದಿನಗಳಲ್ಲಿ ವರದಿ ಸಲ್ಲಿಸುವಂತೆ ಆದೇಶ ನೀಡಿದ್ದರು.
ಇದನ್ನೂ ಓದಿ: ಬೊಮ್ಮಾಯಿ ಹಿಂದೆ ಸೂತ್ರಧಾರಿ ಇದ್ದಾರೆ, ಸರ್ಕಾರಕ್ಕೆ ಯಾವುದೇ ಕಂಟಕವಿಲ್ಲ: ಕೋಡಿಶ್ರೀ ಭವಿಷ್ಯ