ಮೈಸೂರು: ಮೈಸೂರು ದಸರಾ ಅಂಗವಾಗಿ 100 ವರ್ಷಕ್ಕೂ ಹಳೆಯದಾದ ವಿಂಟೇಜ್ ಕಾರುಗಳ ಪ್ರದರ್ಶನವನ್ನು ನಗರದ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಏರ್ಪಡಿಸಲಾಗಿದೆ. ಇಂದು ಸಂಸದ ಪ್ರತಾಪ್ ಸಿಂಹ ಪ್ರದರ್ಶನವನ್ನು ಉದ್ಘಾಟಿಸಿದರು. ಲ್ಯಾಂಡ್ ರೋವರ್, ಅಂಬಾಸಿಡರ್, ರೋಲ್ಸ್ ರಾಯ್ಸ್ ಸೇರಿದಂತೆ 40ಕ್ಕೂ ಹೆಚ್ಚು ವಿಂಟೇಜ್ ಕಾರುಗಳನ್ನು ಪ್ರದರ್ಶನದಲ್ಲಿ ನೋಡಬಹುದು.
ಪ್ರತಾಪ್ ಸಿಂಹ ಮಾತನಾಡಿ, ಖ್ಯಾತ ಉದ್ಯಮಿ ಗೋಪಿನಾಥ್ ಶೆಣೈ ದಂಪತಿ ಕಲೆಕ್ಷನ್ ಮಾಡಿರುವ ವಿಂಟೇಜ್ ಕಾರುಗಳ ಪ್ರದರ್ಶನವನ್ನು ಶಾಸಕ ಶ್ರೀವತ್ಸ ಅವರೊಂದಿಗೆ ಸೇರಿ ಉದ್ಘಾಟನೆ ಮಾಡಿದ್ದೇವೆ. ಯಾವುದೇ ಧರ್ಮದತ್ತಿ ಕಾರ್ಯಕ್ರಮ ಇರಬಹುದು. ಅದರ ಹಿಂದೆ ಗೋಪಿನಾಥ್ ಶೆಣೈ ಇರುತ್ತಾರೆ. ಅವರು ನಮ್ಮ ಮೈಸೂರಿನಲ್ಲೇ ಅತಿ ಹೆಚ್ಚು ಕಾರ್‌ಗಳ ಕಲೆಕ್ಷನ್ ಹೊಂದಿದ್ದಾರೆ. ಇವರನ್ನು ಬಿಟ್ಟರೆ ಮೈಸೂರಿನಲ್ಲಿ ಯಾರ ಬಳಿಯೂ ಈ ತರಹದ ವಿಂಟೇಜ್ ಕಾರ್ ಕಲೆಕ್ಷನ್ ಇಲ್ಲ ಎಂದರು.
ಇದನ್ನೂ ಓದಿ: ಮೈಸೂರು ದಸರಾ: ಪಾರಂಪರಿಕ ಟಾಂಗಾ ಸವಾರಿ ಮಾಡಿದ ಸಚಿವ ಎಚ್ ಕೆ ಪಾಟೀಲ್ ದಂಪತಿ
ಗೋಪಿನಾಥ್ ಶೆಣೈ 40ಕ್ಕಿಂತ ಹೆಚ್ಚು ವಿಂಟೇಜ್ ಕಾರುಗಳನ್ನು ಹೊಂದಿದ್ದಾರೆ. 100 ವರ್ಷಕ್ಕೂ ಹೆಚ್ಚು ಇತಿಹಾಸ ಹೊಂದಿರುವ ಕಾರುಗಳು ಇವರ ಬಳಿ ಇವೆ. ಹಿಟ್ಲರ್ ಓಡಿಸುತ್ತಿದ್ದ ಜೀಪಿನ ಮಾದರಿಯ ಕಾರನ್ನೂ ಸಹ ಹೊಂದಿದ್ದಾರೆ. ಕಳೆದ ವರ್ಷ ಎಸ್.ಟಿ.ಸೋಮಶೇಖರ್ ಬಂದು ಈ ವಿಂಟೇಜ್ ಕಾರ್ ರ‍್ಯಾಲಿ ಉದ್ಘಾಟನೆ ಮಾಡಿದ್ದರು. ಶೆಣೈ ಅವರು ಕಾರುಗಳ ಕಲೆಕ್ಷನ್ ಬಗ್ಗೆ ಬಹಳಷ್ಟು ಆಸಕ್ತಿ ಹೊಂದಿದ್ದಾರೆ. ಮೈಸೂರಿನಲ್ಲಿ ವಿಂಟೇಜ್ ಕಾರುಗಳ ರ‍್ಯಾಲಿಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಇದು ನಮ್ಮ ಮೈಸೂರಿನ ಹೆಮ್ಮೆ ಕೂಡ ಹೌದು. ಇದರ ಜತೆಗೆ ನಾವು ಕೇಳಿರದ, ನೋಡಿರದ ಹಲವು ಮೋಟರ್ ಸೈಕಲ್ಗಳನ್ನೂ ಸಹ ಹೊಂದಿದ್ದಾರೆ. ಇವತ್ತು ಬಂದಾಗಲೂ 1945ರ ಇಸವಿಯ ಕಾರ್ ಅನ್ನು ತೆಗೆದುಕೊಂಡು ಬಂದಿದ್ದಾರೆ. ಹಳೇ ಕಾರುಗಳನ್ನು ಖರೀದಿಸಿ ಅದನ್ನು ಕೋಟ್ಯಂತರ ರುಪಾಯಿ ಖರ್ಚು ಮಾಡಿ ರಿಪೇರಿ ಮಾಡಿಸುತ್ತಾರೆ. ಈ ರೀತಿಯ ಹವ್ಯಾಸ ಅವರನ್ನು ಬಿಟ್ಟು ಬೇರೆ ಯಾರ ಬಳಿಯೂ ಇಲ್ಲ ಎಂದು ಪ್ರತಾಪ್ ಸಿಂಹ ಹೇಳಿದರು.
ಇದನ್ನೂ ಓದಿ: ಆಕರ್ಷಕ ದೀಪಾಲಂಕಾರದಿಂದ ಮೈಸೂರು ನಗರ ಝಗಮಗ-ವಿಡಿಯೋ