ಮೈಸೂರು : ಪ್ಲಾಸ್ಟಿಕ್ ಪರಿಸರವನ್ನು ಕಾಡುತ್ತಿರುವ ಸಮಸ್ಯೆ. ಇಂತಹ ಪ್ಲಾಸ್ಟಿಕ್ ಸಮಸ್ಯೆ ನಿವಾರಣೆಗೆ ಮೈಸೂರು ಮಹಾನಗರ ಪಾಲಿಕೆ ಮುಂದಾಗಿದೆ. ಬಳಸಿ ಬಿಸಾಡುವ ಕವರ್ನಿಂದ ಗಟ್ಟಿಮುಟ್ಟಾದ ಟೈಲ್ಸ್ ತಯಾರಿಸುವ ಘಟಕವನ್ನು ಪಾಲಿಕೆಯ ಕಸ ಸಂಗ್ರಹಣೆ ಘಟಕದಲ್ಲಿ ಸ್ಥಾಪನೆ ಮಾಡಲಾಗಿದ್ದು, ಈ ಘಟಕ ಯಾವ ರೀತಿ ಕೆಲಸ ಮಾಡುತ್ತದೆ ಹಾಗೂ ಇದರಿಂದ ಆಗುವ ಪ್ರಯೋಜನವೇನು ಎಂಬ ಮಾಹಿತಿ ಇಲ್ಲಿದೆ ನೋಡಿ.
ಮೈಸೂರು ಮಹಾನಗರ ಪಾಲಿಕೆಯ ಕಸ ಸಂಗ್ರಹಣ ಘಟಕ ಇರುವ ವಿದ್ಯಾರಣ್ಯಪುರಂನ "ಸೀ ವೇಜ್ " ಫಾರಂನಲ್ಲಿ ಪಾಲಿಕೆಯು ಖಾಸಗಿ ಜಾಗೃತ್ ಟೆಕ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ತಂತ್ರಜ್ಞಾನದ ಸಹಯೋಗದೊಂದಿಗೆ ಫ್ಯಾಕ್ಟರಿ ಪ್ರಾರಂಭ ಮಾಡಿದೆ. ಈ ಕಾರ್ಖಾನೆಯಲ್ಲಿ ಬಳಸಿ ಬಿಸಾಡಿದ ಸಿಂಗಲ್ ಯೂಸ್ ಪ್ಲಾಸ್ಟಿಕ್ಅನ್ನು ಪಾಲಿಕೆಯ ಪೌರಕಾರ್ಮಿಕರು ಕಲೆಕ್ಟ್ ಮಾಡಿ ತಂದು ಕೊಡುತ್ತಾರೆ. ಈ ಪ್ಲಾಸ್ಟಿಕ್ ಅನ್ನು ಕಾರ್ಖಾನೆಯಲ್ಲಿ ಗಟ್ಟಿಮುಟ್ಟಾದ ಟೈಲ್ಸ್ ಆಗಿ ಪರಿವರ್ತಿಸಲಾಗುತ್ತದೆ. ಜೊತೆಗೆ, ಆಹಾರ ಪದಾರ್ಥಗಳನ್ನು ತುಂಬುವ ಪ್ಲಾಸ್ಟಿಕ್ ಕವರ್ಗಳಿಂದಲೂ ಸಹ ಕಂಪನಿ ಟೈಲ್ಸ್ಗಳನ್ನು ತಯಾರಿಸುತ್ತಿದೆ.
ಪ್ರತಿನಿತ್ಯ ಎರಡು ಟನ್ ಪ್ಲಾಸ್ಟಿಕ್ನಿಂದ ಪಾಲಿಕೆಯ ಕಾಮಗಾರಿಗಳಿಗೆ ಬೇಕಾದ ಟೈಲ್ಸ್ ಗಳನ್ನು ತಯಾರು ಮಾಡಲಾಗುತ್ತದೆ. ಇಲ್ಲಿ ತಯಾರಾಗುವ ಟೈಲ್ಸ್ ಕಡಿಮೆ ಖರ್ಚಿನಲ್ಲಿ ಹೆಚ್ಚು ಬಾಳಿಕೆ ಬರುತ್ತದೆ. ಈ ಟೈಲ್ಸ್ಗಳನ್ನು ಪಾಲಿಕೆ ಮಾತ್ರವಲ್ಲದೇ ಇತರರು ಖರೀದಿ ಮಾಡುತ್ತಿದ್ದಾರೆ.
ಪ್ಲಾಸ್ಟಿಕ್ನಿಂದ ಹೇಗೆ ಟೈಲ್ಸ್ ತಯಾರಾಗುತ್ತದೆ?: ಮೈಸೂರು ಮಹಾನಗರ ಪಾಲಿಕೆ ತನ್ನ ಕಸದ ಸಂಗ್ರಹ ಪ್ರದೇಶದಲ್ಲಿ ಜಾಗೃತ್ ಟೆಕ್ ಕಂಪನಿಗೆ ಸ್ಥಳ ನೀಡಿದ್ದು, ಅದೇ ಸ್ಥಳದಲ್ಲಿ ಕಾರ್ಖಾನೆ ಆರಂಭಿಸಿರುವ ಕಂಪನಿಗೆ ಮೈಸೂರು ನಗರದಿಂದ ಪೌರಕಾರ್ಮಿಕರು ಸಂಗ್ರಹಿಸಿ ತಂದ ಪ್ಲಾಸ್ಟಿಕ್ ಕವರ್ಗಳನ್ನು ಕೊಡುತ್ತಾರೆ. ತೂಕ ಆದ ನಂತರ ಪ್ಲಾಸ್ಟಿಕ್ ಕವರ್ಗಳನ್ನು ಯಂತ್ರದ ಸಹಾಯದಿಂದ ಸಣ್ಣದಾಗಿ ಕತ್ತರಿಸಿ ಪುಡಿ ಮಾಡಿಕೊಳ್ಳುತ್ತಾರೆ. ನಂತರ ಉಷ್ಣಾಂಶದ ಮುಖಾಂತರ ಪುಡಿ ಮಾಡಲಾದ ಪ್ಲಾಸ್ಟಿಕ್ ಅನ್ನು ಕರಗಿಸಿ ಬಳಿಕ ಅಚ್ಚಿನ ಮಷಿನ್ಗೆ ಹಾಕಿ, ಟೈಲ್ಸ್ ತಯಾರು ಮಾಡಲಾಗುತ್ತದೆ.
ಹೀಗೆ ತಯಾರಿಸಿದ ಟೈಲ್ಸ್ಗಳು ವಿಶೇಷವಾಗಿದ್ದು, 60 ಟನ್ ಭಾರವನ್ನು ತಡೆದುಕೊಳ್ಳುವ ಶಕ್ತಿ ಹೊಂದಿದೆ. ಜೊತೆಗೆ, ಸಿಮೆಂಟ್ ಟೈಲ್ಸ್ ರೀತಿ ಒಡೆಯುವುದಿಲ್ಲ ಹಾಗೂ ನೀರನ್ನು ಹೀರಿಕೊಳ್ಳುವುದಿಲ್ಲ, ಶಾಖವನ್ನು ತಡೆದುಕೊಳ್ಳುವ ಶಕ್ತಿ ಇದೆ. ಸಿಮೆಂಟ್ ಟೈಲ್ಸ್ಗೆ ಹೋಲಿಸಿದರೆ 30% ರಷ್ಟು ಬೆಲೆ ಕಡಿಮೆ. ತೂಕದಲ್ಲಿ ಕಾಂಕ್ರೀಟ್ ಟೈಲ್ಸ್ 5 ಕೆಜಿ ಬಂದರೆ ಪ್ಲಾಸ್ಟಿಕ್ ನಿಂದ ತಯಾರಿಸಿದ ಟೈಲ್ಸ್ 2 ಕೆ.ಜಿ ಬರುತ್ತದೆ. ಸಾಗಣಿಕೆ ಕೂಡ ಸುಲಭ.
ಇದನ್ನೂ ಓದಿ : ಪರಿಸರ ಮತ್ತು ಜೀವ ಸಂಕುಲಕ್ಕೆ ಮಾರಕ ಪ್ಲಾಸ್ಟಿಕ್.. ಸರ್ವ ವ್ಯಾಪಿಯಾದ ಈ ವಿನಾಶಕಾರಿ ನಿಯಂತ್ರಣಕ್ಕೆ ಬೇಕಿದೆ ತುರ್ತು ಕ್ರಮ
ಇನ್ನು ಪ್ಲಾಸ್ಟಿಕ್ನಿಂದ ತಯಾರಾದರೆ ಟೈಲ್ಸ್ಗಳನ್ನು ಪಾಲಿಕೆ ಖರೀದಿ ಮಾಡಿ, ತನ್ನ ಕಾಮಗಾರಿಗಳಿಗೆ ಬಳಸಿಕೊಳ್ಳುತ್ತಿದೆ. ಈಗಾಗಲೇ ಶಾರದಾದೇವಿ ನಗರ, ಟಿ ಕೆ ಲೇಔಟ್ , ಗಾಂಧಿ ಸ್ಕ್ವೇರ್ ಹಾಗೂ ಮುಂತಾದ ಸ್ಥಳಗಳಲ್ಲಿ ಅಳವಡಿಸಲಾಗಿದೆ ಎಂದು ಪ್ಲಾಸ್ಟಿಕ್ ಟೈಲ್ಸ್ ತಯಾರು ಮಾಡುವ ಜಾಗೃತ್ ಟೆಕ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕ ದರ್ಶನ್ ಮಾಹಿತಿ ನೀಡಿದ್ದಾರೆ.
ಕಳೆದ ಆರು ತಿಂಗಳಿನಿಂದ 350 ಟನ್ ಪ್ಲಾಸ್ಟಿಕ್ ಕಸವನ್ನು ನೀಡಲಾಗಿದ್ದು, ಅದರಲ್ಲಿ 100 ಟನ್ ಪ್ಲಾಸ್ಟಿಕ್ನಿಂದ ಟೈಲ್ಸ್ ತಯಾರು ಮಾಡಲಾಗಿದೆ. ಪ್ರತಿನಿತ್ಯ ಎರಡು ಟನ್ ಪ್ಲಾಸ್ಟಿಕ್ ಬಳಸಿ ಟೈಲ್ಸ್ ಗಳನ್ನ ತಯಾರು ಮಡಲಾಗುತ್ತದೆ. ಖರ್ಚು ಕಡಿಮೆ, ದೀರ್ಘಕಾಲ ಬಾಳಿಕೆ ಬರುತ್ತದೆ. ಪ್ಲಾಸ್ಟಿಕ್ನಿಂದ ತಯಾರಾದ ಈ ಟೈಲ್ಸ್ ಗಳನ್ನು ನಗರದ 4 ಕಡೆ ಬಡಾವಣೆಗಳ ರಸ್ತೆಗಳಿಗೆ ಹಾಕಲಾಗಿದ್ದು, ಇಲ್ಲಿ ತಯಾರಾಗುವ ಟೈಲ್ಸ್ ಗಳನ್ನ ಪಾಲಿಕೆಯೇ ಖರೀದಿ ಮಾಡುತ್ತದೆ ಎಂದು ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ ಅಸಾದ್ ಉರ್ ರೆಹಮಾನ್ ಷರೀಫ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.