ಮೈಸೂರು : ಈ ಬಾರಿ ನಾಡಹಬ್ಬ ದಸರಾವನ್ನು ಸಾಂಪ್ರದಾಯಕವಾಗಿ ಆಚರಿಸಲು ನಿರ್ಧಾರಿಸಲಾಗಿದೆ. ಜೊತೆಗೆ ದಸರಾ ಸಂದರ್ಭದಲ್ಲಿ ನಗರದ 135 ಕಿ. ಮೀ ವ್ಯಾಪ್ತಿಯ ಪ್ರಮುಖ ವೃತ್ತಗಳು, ರಸ್ತೆಗಳು ಹಾಗೂ ಸರ್ಕಾರಿ ಪಾರಂಪರಿಕ ಕಟ್ಟಡಗಳಲ್ಲಿ ದೀಪಾಲಂಕಾರ ಮಾಡಲಾಗುತ್ತಿದೆ. ಈ ವೇಳೆ ಪ್ರತಿ ವೃತ್ತದಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳು, ಸೋಮನಾಥೇಶ್ವರ ದೇವಾಲಯ ಹಾಗೂ ಚಂದ್ರಯಾನ 3 ಮಾದರಿಗಳು ದೀಪಾಲಂಕಾರದಲ್ಲಿ ಮಿಂಚಲಿವೆ. ಈ ಬಾರಿಯ ದಸರಾ ದೀಪಾಲಂಕಾರ ಎಲ್ಲೆಲ್ಲಿ ಇರಲಿದೆ, ಎಷ್ಟು ಖರ್ಚಾಗಲಿದೆ ಎಂಬ ಮಾಹಿತಿ ಸ್ಟೋರಿ ಇಲ್ಲಿದೆ.
ಸಾಂಸ್ಕೃತಿಕ ನಗರಿ ಮೈಸೂರು ದಸರಾ ಮಹೋತ್ಸವದಲ್ಲಿ ಈ ಬಾರಿಯೂ ದೀಪಾಲಂಕಾರದಿಂದ ಝಗಮಗಿಸಲಿದೆ. ಇಸ್ರೋದ ಚಂದ್ರಯಾನ 3 ಯೋಜನೆಯ ಮಾದರಿಯನ್ನೂ ಕೂಡ ನಿರ್ಮಿಸಲಾಗುತ್ತಿದೆ. ಇದರ ಜೊತೆಗೆ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು, ಯುನೆಸ್ಕೊದಿಂದ ಗುರುತಿಸಲ್ಪಟ್ಟ ಸೋಮನಾಥೇಶ್ವರ ದೇವಾಲಯದ ಮಾದರಿ ಕೂಡ ದಸರಾ ದೀಪಾಲಂಕಾರದಲ್ಲಿ ಮೂಡಿಬರುತ್ತಿರುವುದು ವಿಶೇಷ.
ದೀಪಾಲಂಕಾರದ ವೀಕ್ಷಣೆಗೆ ಅವಧಿಯನ್ನು ವಿಸ್ತರಣೆ ಮಾಡುವುವುದಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ತೀರ್ಮಾನಿಸಿದೆ. ಅಕ್ಟೋಬರ್ 15 ರಿಂದ 24 ರವರೆಗೆ ಜರುಗುವ ಹತ್ತು ದಿನಗಳ ನವರಾತ್ರಿ ಮಹೋತ್ಸವದ ವೇಳೆ ದೀಪಾಲಂಕಾರಕ್ಕೆ ಸಿದ್ಧತೆ ನಡೆದಿದೆ.
135 ಕಿ.ಮೀ ದೀಪಾಲಂಕಾರ: ಮೈಸೂರಿನಲ್ಲಿ ಪ್ರಮುಖ ರಸ್ತೆಯುದ್ದಕ್ಕೂ ದೀಪಾಲಂಕಾರ ಮಾಡಲಾಗುತ್ತಿದೆ. ಮೈಸೂರಿನ ಹೊರವಲಯದ ಪ್ರಮುಖ ಹೆದ್ದಾರಿಗಳನ್ನು ಒಳಗೊಂಡಂತೆ ನಗರದ ಜೆ. ಎಲ್. ಬಿ ರಸ್ತೆ, ಇರ್ವಿನ್ ರಸ್ತೆ, ಚಾಮರಾಜ ಜೋಡಿ ರಸ್ತೆ, ಅಲ್ಬರ್ಟ್ ವಿಕ್ಟಾರ್ ರೋಡ್, ಸೈಯಾಜಿ ರಾವ್ ರಸ್ತೆ, ಬಿ. ಏನ್ ರಸ್ತೆ, ಅರಸು ರಸ್ತೆ ಸೇರಿದಂತೆ ಅರಮನೆ ಸುತ್ತಮುತ್ತ ಹಾಗೂ ನಗರದ 119 ವೃತ್ತಗಳಲ್ಲಿ ಸೇರಿ ಒಟ್ಟು 135 ಕಿ. ಮೀ ಉದ್ದದ ರಸ್ತೆಗೆ ದೀಪಾಲಂಕಾರ ಇರಲಿದೆ.
ಮೈಸೂರು ನಗರದ ವಿವಿಧೆಡೆ 30ಕ್ಕೂ ಹೆಚ್ಚು ದೀಪಗಳಿಂದಲೇ ಮಾಡಲ್ಪಡುವ ಆಕೃತಿಗಳನ್ನು ನಿರ್ಮಿಸಲಾಗುತ್ತಿದೆ. ಇವುಗಳನ್ನು ನಗರದ ದೊಡ್ಡಕೆರೆ ಮೈದಾನ, ಚಾಮರಾಜವೃತ್ತ, ಜಯಚಾಮರಾಜ ವೃತ್ತ ಕೆ. ಆರ್ ವೃತ್ತ, ರೈಲ್ವೆ ನಿಲ್ದಾಣದ ಸಮೀಪ, ರಾಮಸ್ವಾಮಿ ವೃತ್ತ, ಎಲ್. ಐ. ಸಿ ವೃತ್ತದಲ್ಲಿ ಸ್ಥಾಪಿಸಲಾಗುತ್ತಿದೆ. ಸರ್ಕಾರಿ ಕಟ್ಟಡಗಳಾದ ಮೂಡಾ ಕಚೇರಿ, ಕಾಡಾ ಕಚೇರಿ, ಹಳೆ ಜಿಲ್ಲಾಧಿಕಾರಿ ಕಚೇರಿ, ಮಹಾನಗರ ಪಾಲಿಕೆ, ಮಹಾರಾಜ ಕಾಲೇಜುಗಳು ವಿವಿಧ ಬಣ್ಣದ ದೀಪಾಲಂಕಾರದೊಂದಿಗೆ ಕಂಗೊಳಿಸಲಿವೆ.
ಟೆಂಡರ್ ಪ್ರಕ್ರಿಯೆ: ''ಈ ಬಾರಿ ದೀಪಾಲಂಕಾರ ಪ್ರಕ್ರಿಯೆಗೆ 6.03 ಕೋಟಿ ರೂ. ಗಳ ಟೆಂಡರ್ ಪ್ರಕ್ರಿಯೆ ನಡೆಸಲಾಗುತ್ತಿದೆ. ಆದರೆ ಗುತ್ತಿಗೆದಾರರು ಯಾರು ಕೂಡ ಇ ಟೆಂಡರ್ ಅನ್ನು ತಗೆದುಕೊಳ್ಳದ ಕಾರಣ ತುಂಡು ಗುತ್ತಿಗೆ ಪ್ರಕ್ರಿಯೆ ಮೂಲಕ ಮೈಸೂರು ನಗರದಲ್ಲಿ ದೀಪಾಲಂಕಾರ ಮಾಡಲಾಗುತ್ತಿದೆ'' ಎಂದು ಹಿರಿಯ ಸೆಸ್ಕ್ ಅಧಿಕಾರಿಗಳು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮೈಸೂರು ದಸರಾ: ಈ ದಿನಗಳಲ್ಲಿ ಸಾರ್ವಜನಿಕರಿಗೆ ಅರಮನೆ ಪ್ರವೇಶ ನಿರ್ಬಂಧ