ಮೈಸೂರು: ಶತಮಾನ ಪೂರೈಸಿರುವ ಮೈಸೂರು ವಿಶ್ವವಿದ್ಯಾನಿಲಯದ 99ನೇ ಘಟಿಕೋತ್ಸವ ಮಾ.17ರಂದು ನಡೆಯಲಿದ್ದು, ಈ ಬಾರಿ ಅಮೃತಾನಂದಮಯಿ ದೇವಿ(ಅಮ್ಮ) ಹಾಗೂ ತಿಪಟೂರಿನ ನೊಣವಿನಕೆರೆ ಸೋಮನಕಟ್ಟೆ ಶ್ರೀ ಕಾಡಸಿದ್ದೇಶ್ವರ ಮಠದ ಕರಿವೃಷಭಾ ದೇಶಿಕೇಂದ್ರ ಶಿವಯೋಗಿಶ್ವರ ಸ್ವಾಮೀಜಿಗಳಿಗೆ ಗೌರವ ಡಾಕ್ಟರೇಟ್ ಸಿಗಲಿದೆ.
ಈ ಸಂಬಂಧ ಮೈಸೂರು ವಿವಿ ಕ್ರಾಫಡ್೯ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮಾತನಾಡಿ, ಒಟ್ಟು 28,163 ಮಂದಿ ಪದವಿ ಪಡೆಯಲಿದ್ದಾರೆ. ಸ್ನಾತಕ ಹಾಗೂ ಸ್ನಾತಕೋತ್ತರ ಸೇರಿದಂತೆ 18127 ವಿದ್ಯಾರ್ಥಿನಿಯರು ಹಾಗೂ10036 ಮಂದಿ ಪುರುಷ ವಿದ್ಯಾರ್ಥಿಗಳು, 384 ಪಿಎಚ್ಡಿ ಪಡೆಯಲಿದ್ದಾರೆ ಎಂದರು.
206 ವಿದ್ಯಾರ್ಥಿಗಳಿಗೆ 368 ಪದಕಗಳು ಹಾಗೂ 182 ನಗದು ಬಹುಮಾನ ನೀಡಲಾಗುವುದು. ಭಾನುವಾರ ಬೆಳಿಗ್ಗೆ 11ಕ್ಕೆ ಘಟಿಕೋತ್ಸವ ಕಾರ್ಯಕ್ರಮ ಆರಂಭವಾಗಲಿದೆ.
ಲೋಕಸಭಾ ಚುನಾವಣೆ ಮುಗಿದ ನಂತರ ಮೈಸೂರು ವಿವಿಯಿಂದ ಬೋಧಕ ಹಾಗೂ ಬೋಧಕೇತರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುವುದು. ವಿವಿಯ ಸಿಬ್ಬಂದಿಗಳ ಕೊರತೆ ಇದೆ ಎಂದು ಹೇಳಿದರು.
ಜಿಟಿಡಿ ಗೆ ತಟ್ಟಿದ ನೀತಿ ಸಂಹಿತೆ:
ಈ ಕಾರ್ಯಕ್ರಮಕ್ಕೆ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಭಾಗಿಯಾಗಬೇಕಿತ್ತು. ಆದರೆ ಲೋಕಸಭಾ ಚುನಾವಣೆ ನೀತಿ ಸಂಹಿತೆ ಇರುವುದರಿಂದ ಕಾರ್ಯಕ್ರಮದ ಭಾಗವಹಿಸುವುದು ಅನುಮಾನ ಎನ್ನಲಾಗಿದೆ.