ಮೈಸೂರು: ದೇಶದ ಅತ್ಯುನ್ನತ ಪರೀಕ್ಷೆಯಾದ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಪರೀಕ್ಷೆಯಲ್ಲಿ ಮೈಸೂರಿನ ಇಬ್ಬರು ರ‍್ಯಾಂಕ್ ಗಳಿಸಿದ್ದಾರೆ.
ಪಿರಿಯಾಪಟ್ಟಣ ತಾಲೂಕಿನ ಕುಡುಕೂರು ನಿವಾಸಿಯಾಗಿರುವ ಪ್ರಸ್ತುತ ಬೆಂಗಳೂರಿನ ಕೆಂಗೇರಿಯಲ್ಲಿ ವಾಸವಾಗಿರುವ ತಾಂಡವಮೂರ್ತಿ ಹಾಗೂ ನವನೀತ ದಂಪತಿ ಪುತ್ರಿ ಕೆ.ಟಿ.ಮೇಘನಾ 465ನೇ ರ‍್ಯಾಂಕ್ ಪಡೆದಿದ್ದಾರೆ. ಇವರು ಅಂಧತ್ವ ಸಮಸ್ಯೆ ಎದುರಿಸುತ್ತಿದ್ದರೂ ಸಾಧನೆ ಶ್ರಮ ಮುಖ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಇವರು 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವೇಳೆಯಲ್ಲಿ ರೆಟಿನಾ ಸಮಸ್ಯೆ ಎದುರಾಗಿ ಶೇ.70ರಷ್ಟು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದರು. ಆದರೆ, ತಮ್ಮ ಜ್ಞಾನದಿಂದ ಬದುಕಿನ ದೃಷ್ಟಿ ಕಂಡುಕೊಂಡಿದ್ದಾರೆ. ಬೆಂಗಳೂರಿನಲ್ಲಿ ಶಾಲಾ - ಕಾಲೇಜು ಶಿಕ್ಷಣ ಮುಗಿಸಿದ ಮೇಘನಾ, 2015ನೇ ಬ್ಯಾಚ್ನಲ್ಲಿ 11ನೇ ರ‍್ಯಾಂಕ್ ಪಡೆದು ಕೆಎಎಸ್ ಪಾಪಸಾಗಿದ್ದರು. ಮೂರು ತಿಂಗಳಿನಿಂದ ಬೆಂಗಳೂರಿನ ಖಜಾನೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇನ್ನು ಮೈಸೂರಿನ ವಿಜಯಶ್ರೀಪುರ ನಿವಾಸಿಯಾಗಿರುವ ಪ್ರಜ್ವಲ್ ಎಂಬುವರು 636ನೇ ರ‍್ಯಾಂಕ್ ಪಡೆದು ಯುಪಿಎಸ್ಸಿ ಎಕ್ಸಾಂ ಪಾಸ್ ಆಗಿದ್ದಾರೆ. ಇವರು ಸತತ ನಾಲ್ಕನೇ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆ ಪಾಸಾಗಿದ್ದಾರೆ. ಮೈಸೂರಿನ ಎನ್ಐಇ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಶಿಕ್ಷಣ ಮುಗಿಸಿದ್ದಾರೆ.