ಮೈಸೂರು: ಖಾಸಗಿ ವ್ಯಕ್ತಿಗೆ ಸೇರಿದ ಫಾರ್ಮ್ ಒಂದರಲ್ಲಿ ಅನುಮಾನಾಸ್ಪದವಾಗಿ 4 ಕೋತಿಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಉತ್ತನಹಳ್ಳಿ ಬಳಿಯ ಫಾರ್ಮ್ನಲ್ಲಿ ನಡೆದಿದೆ.
ನಗರದ ಚಾಮುಂಡಿ ಬೆಟ್ಟದ ಹಿಂಭಾಗದ ಉತ್ತನಹಳ್ಳಿ ಗ್ರಾಮದ ಪಕ್ಕದಲ್ಲಿ ಇರುವ ವಕೀಲರೊಬ್ಬರಿಗೆ ಸೇರಿದ ಫಾರ್ಮ್ ಹೌಸ್ನಲ್ಲಿ, ಇಂದು 4 ಕೋತಿಗಳ ಮೃತದೇಹಗಳು ಸಿಕ್ಕಿವೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪಶು ವೈದ್ಯರ ತಂಡ ಹಾಗೂ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳು ಬರುವಷ್ಟರಲ್ಲಿ ಸತ್ತ ಮಂಗಗಳಲ್ಲಿ 2ನ್ನು ಫಾರ್ಮ್ ಹೌಸ್ಗೆ ಸಂಬಂಧಿಸಿದ ವ್ಯಕ್ತಿಗಳು ಬೆಂಕಿ ಹಾಕಿ ಸುಟ್ಟು ಹಾಕಿದ್ದಾರೆ. ಇನ್ನೆರಡು ಮಂಗಗಳನ್ನು ಪಶು ವೈದ್ಯರ ತಂಡ ವಶಕ್ಕೆ ಪಡೆದು, ಮಂಗಗಳ ಮರಣೋತ್ತರ ಪರೀಕ್ಷೆಯನ್ನು ನಾಳೆ ಬೆಳಗ್ಗೆ ನಡೆಸಲಿದೆ.
ಸತ್ತ ಮಂಗಗಳ ಸ್ಯಾಂಪಲ್ಗಳನ್ನು ಶಿವಮೊಗ್ಗದ ಲ್ಯಾಬ್ಗೆ ಕಳುಹಿಸಿ, ಈ ಮಂಗಗಳ ಸಾವಿಗೆ ಕಾರಣ ಏನು ಅಥವಾ ಮಂಗನ ಕಾಯಿಲೆಯೇ ಎಂಬುದು ತಿಳಿಯಲಿದೆ ಎಂದು ಪಶು ವೈದ್ಯ ಇಲಾಖೆಯ ಅಸಿಸ್ಟೆಂಟ್ ಡೈರಕ್ಟರ್ ಡಾ. ಸುರೇಶ್ ತಿಳಿಸಿದ್ದಾರೆ.