ಮೈಸೂರು : ಚಾಮುಂಡಿ ಬೆಟ್ಟದಲ್ಲಿರುವ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಿ ಹೊಸ ವಾಣಿಜ್ಯ ಸಂಕೀರ್ಣ ನಿರ್ಮಿಸುವುದಾಗಿ ಭರವಸೆ ಕೊಟ್ಟಿದ್ದ ಅಧಿಕಾರಿಗಳು ಇಂದು ಜನರು ಕೇಳಿದ್ರೆ ಕ್ಯಾರೆ ಎನ್ನುತ್ತಿಲ್ಲ ಇದರಿಂದಾಗಿ ವ್ಯಾಪಾರಸ್ಥರ ಬದುಕು ಈಗ ಬೀದಿಗೆ ಬಿದ್ದಿದೆ.
ನಾಡ ದೇವತೆ ಚಾಮುಂಡೇಶ್ವರಿ ದೇವಸ್ಥಾನದ ಸಮೀಪದಲ್ಲಿರುವ ರಸ್ತೆ ಬದಿ ವ್ಯಾಪಾರಿಗಳ ಸ್ಥಿತಿ ಇದಾಗಿದ್ದು, ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಿ ಮಳಿಗೆ ಕೊಡುತ್ತೇವೆ ಅಂತ ಹೇಳಿ ಏಕಾಏಕಿ ಅಂಗಡಿಗಳನ್ನು ತೆರೆವುಗೊಳಿಸಿದ್ದರು. ಇಂದು 116 ಮಳಿಗೆಗಳು ನಿರ್ಮಾಣವಾಗಿದ್ದು, 57 ಮಂದಿಗೆ ಮಳಿಗೆ ಕೀ ಕೊಟ್ರೆ ಇನ್ನು 54 ಜನರಿಗೆ ಕೊಟ್ಟಿಲ್ಲ, ಇನ್ನುಳಿದ 5 ಖಾಲಿ ಬಿದ್ದಿವೆ. ಕೀ ಕೊಟ್ಟಿರುವ ಮಳಿಗೆಗಳನ್ನಾದರೂ ತೆರೆಯಲು ಅಧಿಕಾರಿಗಳು ಬಿಡುತ್ತಿಲ್ಲ. ಕೇಳಿದರೆ ಸಾಬೂಬು ಕೊಡುತ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಅಲ್ಲದೇ ಹೊಸದಾಗಿ ಮತ್ತೆರಡು ವಾಣಿಜ್ಯ ಸಂಕೀರ್ಣ ಕಟ್ಟಡದಲ್ಲಿ 8x8 ಅಳತೆಯ 100 ಮಳಿಗೆ, 10x10 ಅಳತೆಯ 30 ಮಳಿಗೆ ಕಟ್ಟಲಾಗುತ್ತಿದೆ. ಆದರೆ, ಮೊದಲೇ ಕಟ್ಟಿರುವ ವಾಣಿಜ್ಯ ಸಂಕೀರ್ಣದಲ್ಲಿ ಮಳಿಗೆಗಳನ್ನು ನೀಡದೇ ಸತಾಯಿಸುತ್ತಿರುವ ಅಧಿಕಾರಿಗಳ ವರ್ತನೆಯಿಂದಾಗಿ ಕುಟುಂಬಗಳು ಬೀದಿಗೆ ಬಿದ್ದು ಜೀವನಕ್ಕೆ ಆಧಾರವಾಗಿದ್ದ ಅಂಗಡಿ ಮುಂಗಟ್ಟು ಕಳೆದುಕೊಂಡು ನಡುರಸ್ತೆಯಲ್ಲಿ ನಿಂತಿದ್ದಾರೆ.