ಮೈಸೂರು: ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ನಂಜನಗೂಡಿನಲ್ಲಿ ಮಗು ಮಾರಾಟ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಮಕ್ಕಳ ಮಾರಾಟ ಜಾಲವೇ ಪತ್ತೆಯಾಗಿದೆ.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ್ದಾರೆ. ಕಳೆದ ತಿಂಗಳು ಜಿಲ್ಲೆಯ ನಂಜನಗೂಡಿನ ಬಡ ಮಹಿಳೆಯೊಬ್ಬರ 3 ತಿಂಗಳ ಮಗು ಮಾರಾಟ ಪ್ರಕರಣದ ತನಿಖೆಯನ್ನು ಪೊಲೀಸರು ಕೈಗೆತ್ತಿಕೊಂಡಿದ್ದರು. ಈ ಸಂದರ್ಭದಲ್ಲಿ ಶ್ರೀಮತಿ ಅಲಿಯಾಸ್ ಸರಸ್ವತಿ ನಾಡಿಗ್ ಹಾಗೂ ಆಕೆಯ ಮಗಳು ಲಕ್ಷ್ಮಿ ಎಂಬವರು ಪ್ರಕರಣದ ಕಿಂಗ್ಪಿನ್ ಎಂದು ತಿಳಿದುಬಂದಿದೆ ಎಂದು ತಿಳಿಸಿದ್ದಾರೆ.
ಇವರು ಈಗಾಗಲೇ ಮಕ್ಕಳ ಮಾರಾಟ ಪ್ರಕರಣದಲ್ಲಿ ಭಾಗಿಯಾಗಿದ್ದು, ನಿರ್ಗತಿಕರು, ವಿಧವೆಯರ ಮಕ್ಕಳನ್ನು ಅನಾಥಾಶ್ರಮ ನಡೆಸುತ್ತಿರುವುದಾಗಿ ಹೇಳಿ ಪಡೆದುಕೊಂಡಿದ್ದಾರೆ. ಆದರೆ ಆ ಬಳಿಕ ಮಕ್ಕಳಿಲ್ಲದ ದಂಪತಿಗೆ ಕಾನೂನುಬಾಹಿರವಾಗಿ ಲಕ್ಷಾಂತರ ರೂ.ಗೆ ಮಾರಾಟ ಮಾಡಿ ಹಣ ಗಳಿಕೆ ಮಾಡುತ್ತಿದ್ದರು ಎಂಬುದು ಗೊತ್ತಾಗಿದೆ ಅಂತ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.
ಇದೇ ರೀತಿ ನಂಜನಗೂಡಿನ ಮಗುವನ್ನು ಲಕ್ಷಾಂತರ ರೂ.ಗೆ ಮಾರಾಟ ಮಾಡಿದ್ದಾಗಿ ತನಿಖೆ ವೇಳೆ ಬಾಯ್ಬಿಟ್ಟಿದ್ದಾರೆ. ಜೊತೆಗೆ ಜ್ಯೋತಿ ಎಂಬವರ ಮಗುವನ್ನು ಸಹ ಕೊಳ್ಳೇಗಾಲದ ದಂಪತಿಗೆ ಮಾರಾಟ ಮಾಡಿರುವುದು ತನಿಖೆ ವೇಳೆ ಗೊತ್ತಾಗಿದೆ ಎಂದು ತಿಳಿಸಿದರು. ಇಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಇದೇ ಸಂದರ್ಭದಲ್ಲಿ ವಿವರಿಸಿದರು.