ಮೈಸೂರು: ಕೊರೊನಾ ರೋಗಿಗಳ ಸಾವಿನ ಸಂಖ್ಯೆಯಲ್ಲಿ ರಾಜ್ಯದಲ್ಲಿಯೇ ಮೈಸೂರು ಎರಡನೇ ಸ್ಥಾನ ಪಡೆದುಕೊಂಡಿದೆ. ಭಾನುವಾರದವರೆಗೆ ಬೆಂಗಳೂರಿನಲ್ಲಿ 891 ಮಂದಿ, ಮೈಸೂರಿನಲ್ಲಿ 112 ಮಂದಿ, ದಕ್ಷಿಣ ಕನ್ನಡದಲ್ಲಿ 104 ಮಂದಿ ಸಾವನ್ನಪ್ಪಿದ್ದಾರೆ.
ಮೈಸೂರಿನ ಎನ್.ಆರ್.ಕ್ಷೇತ್ರ, ನಂಜನಗೂಡು, ತಿ.ನರಸೀಪುರ, ಹುಣಸೂರು ಹಾಗೂ ಪಿರಿಯಾಪಟ್ಟಣದಲ್ಲಿ ಕೊರೊನಾದಿಂದ ಅಧಿಕ ಮಂದಿ ಮೃತಪಟ್ಟಿದ್ದಾರೆ. ಕಳೆದ 15 ದಿನಗಳಿಂದ ಮೈಸೂರಿನಲ್ಲಿ ಪ್ರತಿನಿತ್ಯ ಸಾರಿ, ಐಎಲ್ಐ ಪ್ರಕರಣಗಳಿಂದ ಹೆಚ್ಚಿನ ಸಾವುಗಳು ಸಂಭವಿಸುತ್ತಿವೆ.
55 ವರ್ಷ ಮೀರಿದವರಿಗೆ ಕೊರೊನಾ ಸೋಂಕು ತಗುಲಿದರೆ ಅವರ ಜೀವಕ್ಕೆ ಅಪಾಯವಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಆದರೆ ಮೈಸೂರಿನಲ್ಲಿ 13 ವರ್ಷದ ಬಾಲಕ, 28 ವರ್ಷದ ಯುವತಿ, 31 ವರ್ಷದ ಯುವಕ, ಇಬ್ಬರು ವೈದ್ಯರು ಸೇರಿದಂತೆ 112 ಮಂದಿ ಸಾವನ್ನಪ್ಪಿದ್ದಾರೆ.
ಕಳೆದ 15 ದಿನಗಳಿಂದ ನಿರಂತರವಾಗಿ ಕೊರೊನಾದಿಂದ ಸಾಯುತ್ತಿರುವವರ ಸಂಖ್ಯೆ ಏರುತ್ತಲೇ ಇದೆ. ಇದರಿಂದ ಜನತೆಯಲ್ಲಿ ಹೆಚ್ಚಿನ ಆತಂಕ ಸೃಷ್ಟಿಯಾಗಿದೆ.