ಮೈಸೂರು : ಕೊರೊನಾದಿಂದಾಗಿ ಪ್ರಪಂಚವೇ ಸ್ತಬ್ಧಗೊಂಡಿದೆ. ಸಾಮೂಹಿಕ ಚಟುವಟಿಕೆಗಳಿಗೆ ಬ್ರೇಕ್ ನೀಡಿದೆ. ಆದರೂ ಜೂನ್ 21ರಂದು ನಡೆಯುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಸಾಂಸ್ಕೃತಿಕ ನಗರಿ ಸಿದ್ಧವಾಗುತ್ತಿದೆ.
ಅಂತಾರಾಷ್ಟ್ರೀಯ ಯೋಗ ದಿನದಂದು ಯೋಗಪಟುಗಳು ಮನೆಗಳ ಬಾಲ್ಕನಿ ಅಥವಾ ಟೆರೇಸ್ ಮೇಲೆ ಬೆಳಗ್ಗೆ 7 ರಿಂದ 7.45ರವರೆಗೆ ಯೋಗ ಪ್ರದರ್ಶನ ಮಾಡಲಿದ್ದಾರೆ. ಮೈಸೂರು ಯೋಗ ಒಕ್ಕೂಟದಿಂದ ಯೋಗ ಪ್ರೊಟೊಕಾಲ್ ಎನ್ನುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಅದನ್ನು ನೋಡಿಕೊಂಡು ಯೋಗ ಪಟುಗಳು ಯೋಗ ದಿನಕ್ಕೆ ಸಿದ್ಧರಾಗುವಂತೆ ಸೂಚನೆ ಕೂಡ ನೀಡಲಾಗಿದೆ.
2018ರಲ್ಲಿ 60 ಸಾವಿರ ಯೋಗ ಪಟುಗಳು ಹಾಗೂ 2019ರಲ್ಲಿ 70 ಸಾವಿರ ಯೋಗ ಪಟುಗಳು ಯೋಗಾಸನ ಪ್ರದರ್ಶಿಸಿ ಯೋಗ ಗಿನ್ನೆಸ್ ದಾಖಲೆ ಮಾಡಲು ಪ್ರಯತ್ನಿಸಿದರು. ಆದರೆ, ಅದು ಸಫಲವಾಗಲಿಲ್ಲ. ಈ ಬಾರಿ 1 ಲಕ್ಷಕ್ಕೂ ಅಧಿಕ ಮಂದಿ ಸೇರಿಸಲು ರೇಸ್‌ಕೋಸ್೯ ಮೈದಾನದಲ್ಲಿ 6 ತಿಂಗಳಿನಿಂದ ಸಿದ್ಧತೆ ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಕೊರೊನಾ ಅರ್ಭಟಕ್ಕೆ ಈ ನಿರ್ಧಾರವನ್ನು ಕೈಬಿಡಲಾಗಿತ್ತು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸೂಚನೆಯಂತೆ 'ಮನೆ ಮನೆ ಯೋಗ'ಕ್ಕೆ ಮೈಸೂರು ಯೋಗ ಒಕ್ಕೂಟ ಸಿದ್ಧತೆ ಮಾಡಿದೆ. ಅಲ್ಲದೇ ಮಾರ್ಗಸೂಚಿಗಳನ್ನು ಸಿದ್ಧ ಮಾಡಿಕೊಂಡಿದ್ದು, ಅದರಂತೆ ಮನೆಗಳ ಬಾಲ್ಕನಿ ಹಾಗೂ ಟೆರೇಸ್ ಮೇಲೆ ಯೋಗ ಪ್ರದರ್ಶಸಿ ಫೋಟೋ ಅಪ್ಲೋಡ್ ಮಾಡಲು ಯೋಗಪಟುಗಳಿಗೆ ಸೂಚನೆ ನೀಡಲಾಗಿದೆ.