ಮೈಸೂರು: ಇಂದಿನಿಂದ ಐಪಿಎಲ್ ಆರಂಭವಾಗಿದ್ದು, ಬೆಟ್ಟಿಂಗ್ ದಂಧೆ ನಡೆಯದಂತೆ ಕಣ್ಣಿಡಲಾಗಿದೆ. ಈ ಹಿಂದೆ ಬೆಟ್ಟಿಂಗ್ ದಂಧೆಯಲ್ಲಿ ಭಾಗಿಯಾಗಿದ್ದವರಿಗೆ ಬೆಟ್ಟಿಂಗ್ನಲ್ಲಿ ಭಾಗಿಯಾಗದಂತೆ ವಾರ್ನಿಂಗ್ ನೀಡಲಾಗಿದೆ. ಬೆಟ್ಟಿಂಗ್ನಲ್ಲಿ ಹಣ ಕಳೆದುಕೊಂಡು ನಷ್ಟಕ್ಕೊಳಗಾಗುವವರು ಸರಗಳ್ಳತನ, ಕಳ್ಳತನ, ಆತ್ಮಹತ್ಯೆ ಮೊದಲಾದ ಕೃತ್ಯಗಳಿಗೆ ಮುಂದಾಗುವ ಸಾಧ್ಯತೆ ಇದೆ. ಹಾಗಾಗಿ ಕ್ರಿಕೆಟ್ ಬೆಟ್ಟಿಂಗ್ ದಂಧೆಯ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ಐಪಿಎಲ್ ಬೆಟ್ಟಿಂಗ್ ದಂಧೆಯಲ್ಲಿ ಭಾಗಿಯಾಗದಂತೆ ಜೂಜುಕೋರರಿಗೆ ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಅವರು ವಾರ್ನಿಂಗ್ ಮಾಡಿದ್ದಾರೆ.
ನಗರದಲ್ಲಿ ಹೈ ಅಲಾರ್ಟ್: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರು ನಗರದಾದ್ಯಂತ ಅಗತ್ಯ ಮುನ್ನೆಚ್ಚರಿಕಾ ಕ್ರಮಕೈಗೊಳ್ಳಲಾಗಿದೆ. ಮೈಸೂರಿನ ಆಯಕಟ್ಟಿನ ಸ್ಥಳಗಳಲ್ಲಿ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯಾದ್ಯಂತ ಎಂಟು ಚೆಕ್ ಪೋಸ್ಟ್ ಗಳಿದ್ದು, ಈ ಪೈಕಿ ನಗರ ವ್ಯಾಪ್ತಿಯಲ್ಲಿ ಮೂರು ಚೆಕ್ ಪೋಸ್ಟ್ಗಳು ಬರುತ್ತವೆ. ಈಗಾಗಲೇ ಐವರು ರೌಡಿಶೀಟರ್ಗಳನ್ನು ಗಡಿಪಾರು ಮಾಡಲಾಗಿದೆ. ಉಳಿದವರಿಗೆ ಸಮಾಜಘಾತುಕ ಕೃತ್ಯಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಲಾಗಿದೆ. ಪರವಾನಗಿ ಮೇಲೆ ಇಟ್ಟುಕೊಂಡಿರುವ ಗನ್, ಬಂದೂಕುಗಳನ್ನು ಪೊಲೀಸ್ ಠಾಣೆಗೆ ನೀಡುವಂತೆ ಸೂಚಿಸಲಾಗಿದೆ. ತೀರಾ ಅಗತ್ಯ ಇರುವವರಿಗೆ ಸೂಕ್ತ ಕಾರಣ ನೀಡಿದರೆ ಸಡಿಲಿಕೆ ಮಾಡಲಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: IPL 2023: ಇಂದಿನಿಂದ ಚುಟುಕು ಕ್ರಿಕೆಟ್ ಅಬ್ಬರ... ಚೊಚ್ಚಲ ಪಂದ್ಯದಲ್ಲಿ ಗುರು-ಶಿಷ್ಯರ ಸಮರ.. ಹೀಗಿದೆ ತಂಡಗಳ ಬಲಾಬಲ
ಪೊಲೀಸರಿಗೆ ಕಾರ್ಯಾಗಾರ: ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾದ ಬೆನ್ನಲ್ಲೇ ಕಾರ್ಯ ಪ್ರವೃತ್ತವಾದ ಪೊಲೀಸ್ ಇಲಾಖೆಯು ಸಿಬ್ಬಂದಿಗೆ ತರಬೇತಿ ಕಾರ್ಯಾಗಾರವನ್ನು ಶುಕ್ರವಾರ ಆಯೋಜಿಸಿತ್ತು. ಮೈಸೂರಿನ ಪೊಲೀಸ್ ಅಧೀಕ್ಷಕರ ಕಚೇರಿಯ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಾಗಾರವನ್ನು ಗಿಡಕ್ಕೆ ನೀರೆರೆಯುವ ಮೂಲಕ ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕಿ ಸೀಮಾ ಲಾಟ್ಕರ್ ಚಾಲನೆ ನೀಡಿದರು.
ಚುನಾವಣೆ ಸಂದರ್ಭದಲ್ಲಿ ಪೊಲೀಸರಿಗೆ ಹೆಚ್ಚಿನ ಜವಾಬ್ದಾರಿ: ಈ ವೇಳೆಯಲ್ಲಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಅವರು, ಪ್ರತಿಯೊಂದು ಚುನಾವಣೆಯ ಸಂದರ್ಭದಲ್ಲಿಯೂ ಪೊಲೀಸರಿಗೆ ತರಬೇತಿ ಕಾರ್ಯಾಗಾರ ನಡೆಯುತ್ತದೆ. ಚುನಾವಣೆಯ ಸಂದರ್ಭದಲ್ಲಿ ಪೊಲೀಸರ ಪಾತ್ರ ಮಹತ್ವದ್ದಾಗಿದೆ. ಚುನಾವಣೆಯಲ್ಲಿ ಯಾವುದೇ ರೀತಿಯ ಅಕ್ರಮಗಳು ನಡೆಯದಂತೆ ಮುಂಜಾಗ್ರತೆ ವಹಿಸುವ ಜವಾಬ್ದಾರಿ ನಮ್ಮ ಮೇಲಿರುತ್ತದೆ. ನಮ್ಮ ಕೆಲಸ ಪಾರದರ್ಶಕವಾಗಿರಬೇಕಾಗುತ್ತದೆ. ಜನರ ವಿಶ್ವಾಸದೊಂದಿಗೆ ಕೆಲಸ ಮಾಡೋಣ ಎಂದು ಸಲಹೆ ನೀಡಿದರು.
ಮಹತ್ವದ ತರಬೇತಿ ಕಾರ್ಯಾಗಾರದಲ್ಲಿ ಮೈಸೂರು ನಗರ ಪೋಲೀಸ್ ಆಯುಕ್ತ ರಮೇಶ್ ಬಾನೋತ್, ಎಎಸ್ಪಿ ನಂದಿನಿ, ಡಿಸಿಪಿ ಮುತ್ತುರಾಜ್, ಸಿಐಡಿಯ ಕಾನೂನು ಸಲಹೆಗಾರ ಮಹೇಶ್ ವಿ ವೈದ್ಯ ಹಾಗು ಮೈಸೂರು ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು.
ಇದನ್ನೂ ಓದಿ: IPL 2023: 16ನೇ ಆವೃತ್ತಿಯ ಐಪಿಎಲ್ಗೆ ಅದ್ಧೂರಿ ಆರಂಭ... ನಾಟು ನಾಡು ಹಾಡಿಗೆ ಹೆಜ್ಜೆ ಹಾಕಿದ ರಶ್ಮಿಕಾ