ಮೈಸೂರು: ಹೊರ ರಾಜ್ಯಗಳಿಗೆ ಕೊಂಡಿಯಾಗಿರುವ ರಾಷ್ಟ್ರೀಯ ಹೆದ್ದಾರಿಗಳು ಅಭಿವೃದ್ಧಿಯಾಗುತ್ತಿದ್ದು, ಜಿಲ್ಲೆಯ ಅಭಿವೃದ್ಧಿಯಲ್ಲಿ ಇವುಗಳ ಪಾತ್ರ ಪ್ರಮುಖವಾಗಿದೆ.
ಕರ್ನಾಟಕದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಜಿಲ್ಲೆಗಳಲ್ಲಿ ಮೈಸೂರು ಸಹ ಒಂದಾಗಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಕಳೆದ 8 ವರ್ಷಗಳಿಂದ ಅಭಿವೃದ್ಧಿಯಾಗುತ್ತಿವೆ. ಮೈಸೂರು ಪ್ರವಾಸೋದ್ಯಮದ ಜೊತೆಗೆ ಶಿಕ್ಷಣ, ಕೈಗಾರಿಕೆ, ಐಟಿಬಿಟಿ ಅಭಿವೃದ್ಧಿ ಜೊತೆಗೆ ಎಲ್ಲಾ ರೀತಿಯ ಮೂಲ ಸೌಲಭ್ಯಗಳನ್ನು ಹೊಂದಿರುವ ಜಿಲ್ಲೆಯಾಗಿದೆ. ಮೈಸೂರು ಕೇರಳಕ್ಕೆ ಗಡಿ ಭಾಗ ಹೊಂದಿದ್ದು, ತಮಿಳುನಾಡಿಗೂ ಸಹ ಕೈಗಾರಿಕಾ ಅಭಿವೃದ್ಧಿಗೆ ಬೇಕಾದ ಕಚ್ಚಾ ವಸ್ತುಗಳು ರಸ್ತೆ ಮೂಲಕವೇ ಬರುತ್ತವೆ. ಜೊತೆಗೆ ಮಹಾರಾಷ್ಟ್ರ, ಗೋವಾ ಸೇರಿದಂತೆ ಇತರ ರಾಜ್ಯಗಳಿಗೂ ಸಂಪರ್ಕ ಹೊಂದಿದ್ದು, ಪ್ರವಾಸೋದ್ಯಮದ ಅಭಿವೃದ್ಧಿಗೆ ರಾಷ್ಟ್ರೀಯ ಹೆದ್ದಾರಿಗಳು ಪ್ರಮುಖ ಪಾತ್ರ ವಹಿಸಿವೆ.
ಮುಖ್ಯವಾಗಿ ಮೈಸೂರು-ಬೆಂಗಳೂರು ನಡುವೆ ಕೇಂದ್ರ ಸರ್ಕಾರದ ಯೋಜನೆಯಿಂದ ಈಗಿರುವ ಚತುಷ್ಪಥ ರಸ್ತೆಯಿಂದ ದಶ ಪಥದ ರಸ್ತೆಯ ಅಭಿವೃದ್ಧಿಗೆ 7,550 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಮಡಿಕೇರಿ ಕುಶಾಲನಗರ ಮೈಸೂರಿನ ಸಂಪರ್ಕ ರಸ್ತೆ 4 ಹೈವೇಗೆ ಮೈಸೂರಿನಿಂದ ಕುಶಾಲನಗರದ ವರೆಗೆ 3,120 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಅದರ ಕಾಮಗಾರಿ ನಡೆಯುತ್ತಿದೆ. ಮೈಸೂರು ನಗರದ ರಿಂಗ್ ರಸ್ತೆಯನ್ನು ನ್ಯಾಷನಲ್ ಹೈವೇ ಆಗಿ ಮಾರ್ಪಡಿಸಿ 146 ಕೋಟಿ ರೂ. ಕಾಮಗಾರಿ ಶುರುವಾಗಿದ್ದು, ನಂಜನಗೂಡು ರಾಷ್ಟ್ರೀಯ ಹೆದ್ದಾರಿ ಮೂಲಕ ತಮಿಳುನಾಡು ಮತ್ತು ಕೇರಳಕ್ಕೂ ಸಂಪರ್ಕ ಕಲ್ಪಿಸಬಹುದಾಗಿದೆ.
ಒಟ್ಟಾರೆ ರಾಜಧಾನಿಗಳ ಜೊತೆಗೆ ಇತರ ನಗರಗಳಿಗೂ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಇವು ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.