ಮೈಸೂರು : ಜಿಲ್ಲೆಯ ನಾಗಮ್ಮ ಎಂಬುವರು ಅಂಗಾಂಗ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. 5 ಜನರ ಪ್ರಾಣ ಉಳಿಸಲು ನೆರವಾಗಿದ್ದಾರೆ.
2 ಮೂತ್ರಪಿಂಡಗಳು, 1 ಯಕೃತ್ತು, ಹೃದಯಕವಾಟಗಳು ಮತ್ತು ಕಾರ್ನಿಯಾಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಕಂಡಿದ್ದಾರೆ. ಮಳವಳ್ಳಿ ಮೂಲದವರಾದ ನಾಗಮ್ಮ(45) ಅವರು ಬ್ರೈನ್ ಟೂಮರ್‌ನಿಂದ ಬಳಲುತ್ತಿದ್ದರು. ಇವರು ಜ.13ರಂದು ಮಳವಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.
ಆದರೆ, ಅವರ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆ ಜ.13ರ ಮಧ್ಯರಾತ್ರಿ 2.15ಕ್ಕೆ ಅಪೋಲೋ ಬಿಜಿಎಸ್ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು. ಅಲ್ಲಿ ಬ್ರೈನ್ ಟೂಮರ್‌ನಿಂದ ಬಳಲುತ್ತಿದ್ದ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ನಾಗಮ್ಮ ಅವರ ಆರೋಗ್ಯವು ಬಹಳ ಗಂಭೀರ ಸ್ಥಿತಿಯಲ್ಲಿದ್ದಾಗ ಎರಡು ದಿನಗಳ ಕಾಲ ಲೈಫ್ ಸಪೋರ್ಟ್‌ನಲ್ಲಿ ಇರಿಸಲಾಗಿತ್ತು.
ಜ.15ರ ಬೆಳಗ್ಗೆ 11.45ರ ಸಮಯದಲ್ಲಿ ಮಾನವ ಅಂಗಾಂಗ ಕಸಿ ಕಾಯ್ದೆ 1994ರ ಆಸ್ಪತ್ರೆಯ ಪ್ರೋಟೋಕಾಲ್ ಪ್ರಕಾರ, ಮೆದುಳು ನಿಷ್ಕ್ರಿಯವಾಗಿದೆ ಎಂದು ಅಪೋಲೊ ಬಿಜಿಎಸ್ ಆಸ್ಪತ್ರೆಯ ಪ್ಯಾನೆಲ್ಲಿಸ್ಟ್‌ನಲ್ಲಿರುವ ವೈದ್ಯರು ಘೋಷಿಸಿದರು. ನಾಗಮ್ಮರವರು ಆರೋಗ್ಯವಾಗಿದ್ದಾರೆ ಮತ್ತು ಹಲವಾರು ಪರೀಕ್ಷೆಗಳಿಂದ ಅವರು ಅಂಗಾಂಗ ದಾನಕ್ಕೆ ಅರ್ಹರು ಎಂದು ಖಚಿತಪಡಿಸಲಾಯಿತು.
ನಿಗದಿತ ಪ್ರೋಟೋಕಾಲ್‌ಗಳ ಪ್ರಕಾರ, ಅಂಗಾಂಗ ದಾನಕ್ಕಾಗಿ ಅವರ ಕುಟುಂಬದವರಿಗೆ ಸಲಹೆ ನೀಡಲಾಯಿತು. ಈ ಸಂದರ್ಭದಲ್ಲಿ ನಾಗಮ್ಮರವರ ಗಂಡ ಮತ್ತು ಮಕ್ಕಳು ಅಂಗಾಂಗ ದಾನ ಮಾಡಲು ಮುಂದೆ ಬಂದರು.
ಅಂಗಾಂಗ ದಾನ ಪ್ರೋಟೋಕಾಲ್‌ಗಳ ಪ್ರಕಾರ, ಮೊದಲು ಝೆಡ್‌ಸಿಸಿಕೆ ಎಂದು ಕರೆಯಲ್ಪಡುತ್ತಿದ್ದ ಜೀವ ಸಾರ್ಥಕಥೆಯ ಅಧಿಕಾರಿಗಳು ಅಂಗ ಸ್ವೀಕರಿಸುವವರ ಕಾಯುವ ಪಟ್ಟಿಗೆ ಅನುಗುಣವಾಗಿ ಪ್ರಕ್ರಿಯೆಯನ್ನು ಪ್ರಾರಂಭಿಸಿದರು. ಜ.15ರ ಸಂಜೆ 4.30ಕ್ಕೆ ನಾಗಮ್ಮನರವರ ಅಂಗಾಂಗಗಳನ್ನು (2 ಮೂತ್ರಪಿಂಡಗಳು, 1 ಯಕೃತ್ತು, ಹೃದಯಕವಾಟಗಳು ಮತ್ತು ಕಾರ್ನಿಯಾಗಳನ್ನು) ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಯಿಂದ ಕೆಳಗಿನ ಆಸ್ಪತ್ರೆಗಳಿಗೆ ವರ್ಗಾಯಿಸಲಾಗಿದೆ.
ಇದನ್ನೂ ಓದಿ: ನೆರೆಗೆ ಸೂರು ಕಳ್ಕೊಂಡಿದ್ದ ವೃದ್ಧೆಗೆ ನಾಲ್ಕೇ ತಿಂಗಳಲ್ಲಿ ಮನೆ.. ತವರು ಜಿಲ್ಲೆ ಸಂತ್ರಸ್ತೆಗೆ ಸಿಎಂ ಸಂಕ್ರಾಂತಿ ಉಡುಗೊರೆ..
ಎರಡು ಮೂತ್ರಪಿಂಡಗಳು ಅಪೋಲೊ ಆಸ್ಪತ್ರೆಗೆ, ಯಕೃತ್ತು ಹಾಗೂ ಹೃದಯ ಕವಟವನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ, ಕಾರ್ನಿಯಾವನ್ನು ಮೈಸೂರು ಐ ಬ್ಯಾಂಕ್‌ಗೆ ಕಳುಹಿಸಲಾಯಿತು. ಅಪೋಲೋ ಬಿಜಿಎಸ್ ಆಸ್ಪತ್ರೆ ಬಹು ಅಂಗಾಂಗ ಕಸಿಗಳಿಗೆ ಪರವಾನಿಗೆ ಪಡೆದ ಕೇಂದ್ರವಾಗಿದೆ. ಅಂಗಾಂಗ ದಾನವನ್ನು ಉತ್ತೇಜಿಸುವಲ್ಲಿ ಮತ್ತು ಈ ಉದಾತ್ತ ಉದ್ದೇಶಕ್ಕಾಗಿ ಮುಂದೆ ಬಂದ ಮೃತ ಕುಟುಂಬಕ್ಕೆ ಅಪೋಲೋ ಬಿಜಿಎಸ್ ಆಸ್ಪತ್ರೆಯು ಧನ್ಯವಾದಗಳನ್ನು ಅರ್ಪಿಸಿದೆ. ಅಪೋಲೋ, ಬಿಜಿಎಸ್ ಆಸ್ಪತ್ರೆಯಿಂದ ಮಣಿಪಾಲ್ ಆಸ್ಪತ್ರೆಯವರೆಗೆ ತುರ್ತು ಅಂಗ ವರ್ಗಾವಣೆಗಾಗಿ ಗ್ರೀನ್ ಕಾರಿಡರ್ ರಚಿಸಿ ಬೆಂಬಲ ನೀಡಿದ ಮೈಸೂರು ನಗರ ಪೊಲೀಸರಿಗೆ ಅಪೋಲೋ ಆಸ್ಪತ್ರೆ ಧನ್ಯವಾದ ಹೇಳಿದೆ.