ಮೈಸೂರು: ಮೈಸೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಈಗ ಕಾಂಗ್ರೆಸ್ನಲ್ಲಿ ಒಳಗಿದ್ದ ಬಣ ರಾಜಕೀಯ ಸ್ಫೋಟಕ್ಕೆ ಕಾರಣವಾಗಿದ್ದು, ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವಿನ ಬಣ ರಾಜಕೀಯ ಜಗ್ಗಾಟ ನಡೆದಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಮೈಸೂರು ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಚುನಾವಣೆಯಲ್ಲಿ ನಡೆದ ಘಟನಾವಳಿಗಳು ಸಿದ್ದರಾಮಯ್ಯ ಅವರ ಕೋಪಕ್ಕೆ ಕಾರಣವಾಗಿವೆಯಂತೆ. ಶಾಸಕ ತನ್ವೀರ್ ಸೇಠ್ಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಇಂದು ತನ್ವೀರ್ ಸೇಠ್ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಈ ನೋಟಿಸ್ಗೆ ವಿವರಣೆ ನೀಡಲಿದ್ದಾರೆ .
ಡಿಕೆಶಿ ಭೇಟಿಗೆ ತೆರಳಿದ ತನ್ವೀರ್ ಸೇಠ್ : ಮೇಯರ್ ಚುನಾವಣೆಯ ಸಂದರ್ಭದಲ್ಲಿ ಕೊನೆ ಕ್ಷಣದಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಜೆಡಿಎಸ್ಗೆ ಮೇಯರ್ ಸ್ಥಾನ ಬಿಟ್ಟು ಕೊಡಲು ಕಾರಣವಾದ ಅಂಶಗಳು, ಜೊತೆಗೆ ಬಿಜೆಪಿಯಿಂದ ನಮ್ಮ ಪಕ್ಷದವರು ಅಪರೇಷನ್ ಕಮಲಕ್ಕೆ ಒಳಗಾಗುವುದನ್ನು ತಪ್ಪಿಸಲು ಮೈತ್ರಿಯ ಅನಿವಾರ್ಯತೆಯ ಬಗ್ಗೆ ಇಂದು 5 ಪುಟದ 4 ಪ್ರಶ್ನೆಗಳಿಗೆ ಶಾಸಕ ತನ್ವೀರ್ ಸೇಠ್ ವಿವರಣೆ ನೀಡಲಿದ್ದಾರಂತೆ.
ಸಿದ್ದರಾಮಯ್ಯ ಕೋಪ ಏಕೆ?: ಚಾಮುಂಡೇಶ್ವರಿ ಚುನಾವಣೆಯಲ್ಲಿ ಸೋತ ಬಳಿಕ ಸಿದ್ದರಾಮಯ್ಯ ಅವಕಾಶ ಸಿಕ್ಕ ಕಡೆ ಜೆಡಿಎಸ್ ಪಕ್ಷವನ್ನು ತುಳಿಯಲು ಪ್ರಯತ್ನ ಮಾಡುತ್ತಲೇ ಬಂದಿದ್ದರು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಸಾಮಾನ್ಯವಾಗಿವೆ. ಸಿದ್ದರಾಮಯ್ಯ ಪಾಲಿಕೆಯ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದವರು ತಾವಾಗಿಯೇ ಮೈತ್ರಿಗೆ ಬಂದರೆ ಜೊತೆಗೆ ಮೇಯರ್ ಸ್ಥಾನ ಬಿಟ್ಟು ಕೊಟ್ಟರೆ ಮಾತ್ರ ಹಿಂದಿನ ಒಪ್ಪಂದದಂತೆ ಮೈತ್ರಿ ಮಾಡಿಕೊಳ್ಳಿ. ಇಲ್ಲವಾದರೆ ಮೈತ್ರಿ ಮಾಡದೇ ಎಲ್ಲ ಕಾಂಗ್ರೆಸ್ ಪಾಲಿಕೆಯ ಸದಸ್ಯರು ಒಟ್ಟಾಗಿ ಇರಿ ಎಂದು ಹೇಳಿದ್ದರಂತೆ.
ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಚುನಾವಣೆಯ ಉಸ್ತುವಾರಿಯನ್ನು ಸ್ಥಳೀಯ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ಗೆ ವಹಿಸಿದ್ದರು. ಈ ಸಂದರ್ಭದಲ್ಲಿ ತನ್ವೀರ್ ಸೇಠ್ ಜೆಡಿಎಸ್ ಜೊತೆ ಮೈತ್ರಿ ಮುಂದುವರಿಸುವ ಬಗ್ಗೆ ಸ್ಥಳೀಯ ಜೆಡಿಎಸ್ ಶಾಸಕ ಸಾ ರಾ ಮಹೇಶ್ ಜೊತೆ ಮಾತುಕತೆ ನಡೆಸಿ ಆ ಮೂಲಕ ಜೆಡಿಎಸ್ ವರಿಷ್ಠರನ್ನು ಭೇಟಿಮಾಡಿ ಮೈತ್ರಿ ಮುಂದುವರೆಸುವಂತೆ ಮಾತುಕತೆ ನಡೆಸಲು ಮುಂದಾದರು. ಈ ಸಂದರ್ಭದಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ಪಕ್ಷವು ಸಹ ಸ್ಥಳೀಯ ನಾಯಕರ ಜೊತೆ ಸೇರಿ ಮೈತ್ರಿ ಮಾತುಕತೆ ನಡೆಸಿದರು .
ಈ ನಡುವೆ ಚುನಾವಣೆಯ ಹಿಂದಿನ ದಿನ ಜೆಡಿಎಸ್ ಮುಖಂಡರಾದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿ ಚುನಾವಣೆ ರಣತಂತ್ರ ಹೆಣೆದರು. ಈ ಸಂದರ್ಭದಲ್ಲಿ ನಡೆದ ಮೇಯರ್ ಚುನಾವಣೆಯಲ್ಲಿ ಶಾಸಕರ ಗೈರು, ಪಾಲಿಕೆಯ ಸದಸ್ಯರು ಖರೀದಿಯ ಮಾತುಗಳಿಂದ ವಿಚಲಿತರಾದ ತನ್ವೀರ್ ಸೇಠ್ ಕೊನೆ ಕ್ಷಣದಲ್ಲಿ ಜೆಡಿಎಸ್ ಪಕ್ಷಕ್ಕೆ ಮೇಯರ್ ಸ್ಥಾನ , ತಮಗೆ ಉಪಮೇಯರ್ ಸ್ಥಾನ ಪಡೆಯಲು ತೀರ್ಮಾನಿಸಿ, ಕೌನ್ಸಿಲ್ ಸಭೆಗೆ ಹೋದರು. ಈ ವೇಳೆ, ವಿಚಾರ ತಿಳಿದ ಸಿದ್ದರಾಮಯ್ಯ ಈ ಮೈತ್ರಿ ಬೇಡ ಎಂದು ತಿಳಿಸಲು ಹಲವು ಬಾರಿ ತನ್ವೀರ್ ಸೇಠ್ ಗೆ ಫೋನ್ ಮಾಡಿದರು. ಫೋನನ್ನು ರಿಸೀವ್ ಮಾಡಲಿಲ್ಲ ಎಂದು ಕೋಪಗೊಂಡ ಸಿದ್ದರಾಮಯ್ಯ ತವರು ಕ್ಷೇತ್ರದಲ್ಲಿ ನನ್ನ ಮಾತು ಮೀರಿ ಮೈತ್ರಿ ಮಾಡಿಕೊಂಡಿದ್ದು, ಅವರ ಕೋಪಕ್ಕೆ ಕಾರಣವಾಯಿತು. ಜೊತೆಗೆ ಡಿಕೆ ಶಿವಕುಮಾರ್ ತೆರೆಮರೆಯಲ್ಲಿ ನಡೆಸಿದ ತಂತ್ರ ಫಲನೀಡಿದ್ದು. ಸಿದ್ದು ಕೋಪಕ್ಕೆ ಮತ್ತಷ್ಟು ಕಾರಣವಾಯಿತು .
ಹೈಕಮಾಂಡ್ ತಲುಪಿದ ಮೇಯರ್ ಮೈತ್ರಿ ರಗಳೆ. ತವರು ಕ್ಷೇತ್ರದಲ್ಲಿಯೇ ತೀವ್ರ ಮುಖಭಂಗ ಅನುಭವಿಸಿದ ಸಿದ್ದರಾಮಯ್ಯ, ಕೋಪಗೊಂಡು ಈ ವಿಚಾರದಲ್ಲಿ ತಲೆದಂಡ ಆಗಲೇಬೇಕು ಎಂದು ಪಟ್ಟು ಹಿಡಿದಿದ್ದು, ಹೈಕಮಾಂಡ್ ಗೆ ತಮ್ಮ ಆಪ್ತರ ಮೂಲಕ ದೂರು ನೀಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಎ.ಐ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಗೆ ವಿವರಣೆ ನೀಡಿದ್ದಾರೆ.
ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಮೂಲಕ ತಮ್ಮ ಹಿನ್ನೆಡೆಗೆ ತವರಿನಲ್ಲಿ ಕಾರಣವಾಗಿದ ಸಿದ್ದುಗೆ ಸಹಿಸಲು ಸಾಧ್ಯವಾಗುತ್ತಿಲ್ಲ . ವಿಧಾನ ಸಭೆಯ ಚುನಾವಣೆಗೆ ಇನ್ನು ಎರಡು ವರ್ಷಕ್ಕೆ ಹೆಚ್ಚಿನ ಸಮಯ ಇದ್ದ ಈಗಾಗಲೇ ಕಾಂಗ್ರೆಸ್ ನಲ್ಲಿ ಮುಂದಿನ ಮುಖ್ಯಮಂತ್ರಿಯ ಚರ್ಚೆ ಆಗುತಿದ್ದೆ. ಈ ಮಧ್ಯೆ ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ - ಡಿಕೆ ಶಿವಕುಮಾರ್ ಬಣದ ನಡುವೆ ನಡೆಯುತಿದ್ದ ಒಳಗಿನ ಬಣ ರಾಜಕೀಯ ಈಗ ಮೈಸೂರು ಮೇಯರ್ ಚುನಾವಣೆಯ ಮೈತ್ರಿಯಿಂದ ಹೊರಗೆ ಬಂದಿದೆ . ಇದು ಎಲ್ಲಿಗೆ ತಲುಪುತ್ತದೆ ಎಂಬುದನ್ನು ಕಾದು ನೋಡುವ ಮುನ್ನ ಶಾಸಕ ತನ್ವೀರ್ ಸೇಠ್ ಗೆ ಡಿಕೆ ಶಿವಕುಮಾರ್ ಬೆಂಬಲ ಇರುವುದರಿಂದ ತನ್ವೀರ್ ಮೇಲೆ ಯಾವುದೇ ಕ್ರಮ ಸದ್ಯದ ಸ್ಥಿತಿಯಲ್ಲಿ ಸಾಧ್ಯವಿಲ್ಲ ಎನ್ನಲಾಗಿದೆ . ಈ ಮಧ್ಯೆ ಬಿಜೆಪಿಯಿಂದ ಮಂತ್ರಿ ಸ್ಥಾನ ಸಿಗದೆ ಬೇಸರಗೊಂಡಿರುವ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಮರಳಿ ಕಾಂಗ್ರೆಸ್ ಗೆ ಬರಲು ತನ್ವೀರ್ ಮೂಲಕ ಪ್ರಯತ್ನ ನಡೆಸುತ್ತಿರುವುದಾಗಿ ಈಗ ಗುಟ್ಟಾಗಿ ಉಳಿದಿಲ್ಲ .
ಏನಾದರೂ ಆಗಲಿ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಸಿದ್ದು ಕೈ ಮೇಲಾಗದ ರೀತಿ ತಡೆಯಲು ಪ್ರಯತ್ನ , ತಡೆಯಲು ಈಗಾಗಲೇ ಕಾರ್ಯತಂತ್ರ ನಡೆಯುತ್ತಿದೆ . ಇದು ಸಿದ್ದರಾಮಯ್ಯ ಕೋಪಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.