ಮೈಸೂರು: ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಜನವರಿ 18ರಂದು ಚುನಾವಣಾ ದಿನಾಂಕ ನಿಗದಿಯಾಗಿದೆ.
ಕಳೆದ ಒಂದು ತಿಂಗಳ ಹಿಂದೆ ನಡೆಯಬೇಕಿದ್ದ ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಕೊನೆಗೂ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಜನವರಿ 18 ರಂದು ಚುನಾವಣೆ ನಡೆಯಲಿದೆ.
ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಈಗಾಗಲೇ ಮೀಸಲಾತಿ ಪ್ರಕಟವಾಗಿದ್ದು ಮೇಯರ್ ಸ್ಥಾನ ಹಿಂದುಳಿದ ವರ್ಗ ಎ , ಉಪಮೇಯರ್ ಸ್ಥಾನಕ್ಕೆ ಪರಿಶಿಷ್ಟ ಜಾತಿಗೆ ನಿಗದಿಯಾಗಿದ್ದು , ಈ ಬಾರಿಯೂ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಮೈತ್ರಿ ಸಾಧ್ಯತೆ ಹೆಚ್ಚಾಗಿದೆ. ಈ ಇಬ್ಬರು ಮೈತ್ರಿ ಮಾಡಿಕೊಂಡರೆ ಜೆಡಿಎಸ್ ಗೆ ಮೇಯರ್ ಸ್ಥಾನ ಕಾಂಗ್ರೆಸ್ಗೆ ಉಪಮೇಯರ್ ಸ್ಥಾನ ಖಚಿತವಾಗಿದ್ದು , ಈಗಾಗಲೇ ಎರಡು ಪಕ್ಷಗಳಲ್ಲೂ ಆಕಾಂಕ್ಷಿಗಳು ತೆರೆಮರೆಯಲ್ಲಿ ತಮ್ಮ ರಾಜ್ಯ ಮಟ್ಟದ ನಾಯಕರಿಗೆ ಒತ್ತಡ ಹೇರುತ್ತಿದ್ದಾರೆ.
ಈ ನಡುವೆ ಬಿಜೆಪಿ ಕಾದುನೋಡುವ ತಂತ್ರಕ್ಕೆ ಮೊರೆಹೋಗಿದ್ದು ಕೊನೆ ಗಳಿಗೆಯಲ್ಲಿ ಆಪರೇಷನ್ ಕಮಲ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಒಟ್ಟಾರೆ ಇದೇ ತಿಂಗಳ ಜನವರಿ 18 ರಂದು ನಡೆಯುವ ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಚುನಾವಣೆ ಈಗ ಕುತೂಹಲ ಉಂಟುಮಾಡಿದೆ.