ಮೈಸೂರು: ನಗರದ ಖಾಸಗಿ ಹೋಟೆಲ್ನಲ್ಲಿನ ಪ್ರೇಮಿಗಳ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಮೊದಲಿಗೆ ಪ್ರೇಯಸಿಯನ್ನ ಕೊಂದಿರುವ ಪ್ರಿಯತಮ ನಂತರ ಪೊಲೀಸರಿಗೆ ಸಿಕ್ಕಿಬೀಳುವ ಭಯದಿಂದ ತಾನೂ ನೇಣಿಗೆ ಕೊರಳೊಡ್ಡಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಮೈಸೂರಿನ ಹೆಬ್ಬಾಳಿನ ಖಾಸಗಿ ಹೋಟೆಲ್ನಲ್ಲಿ ಬುಧವಾರ ರಾತ್ರಿ ಮಂಡ್ಯ ಮೂಲದ ಅಮೂಲ್ಯ ಮತ್ತು ಲೋಕೇಶ್ ಅವರ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೊದಲಿಗೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ತಿಳಿಯಲಾಗಿತ್ತು. ಆದರೆ ಇದು ಆತ್ಮಹತ್ಯೆಯಲ್ಲ. ಪ್ರಿಯತಮೆಯನ್ನ ಕೊಂದು, ನಂತರ ಪ್ರಿಯಕರ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತನಿಖೆ ನಡೆಸಿರುವ ಪೊಲೀಸರು ತಿಳಿಸಿದ್ದಾರೆ.
ಮೊದಲಿಗೆ ಹಗ್ಗದಲ್ಲಿ ಕತ್ತು ಬಿಗಿದು ಅಮೂಲ್ಯಳನ್ನ ಕೊಲೆ ಮಾಡಿರುವ ಲೋಕೇಶ್, ನಂತರ ಸ್ನೇಹಿತನಿಗೆ ಕರೆ ಮಾಡಿ, ವಿಷಯ ತಿಳಿಸಿದ್ದು, ನೀನು ಮೈಸೂರಿಗೆ ಬಾ, ಈ ವಿಚಾರ ಯಾರಿಗೂ ಹೇಳಬೇಡ ಎಂದು ಹೇಳಿದ್ದಾನೆ.
ಜೊತೆಗೆ ನಾನು ಕೂಡ ಸಾಯಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಆತನ ಸ್ನೇಹಿತ ನಿತಿನ್, ನಾನು ಮೈಸೂರಿಗೆ ಬರುತ್ತಿದ್ದೇನೆ ಸಾಯಬೇಡ ಎಂದು ಲೋಕೇಶ್ನನ್ನು ಆತ್ಮಹತ್ಯೆ ನಿರ್ಧಾರ ಕೈಬಿಡುವಂತೆ ಹೇಳಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಆದರೆ ಜೈಲು ಸೇರುವ ಭಯದಿಂದ ಸ್ನೇಹಿತ ಬರುವುದರೊಳಗೆ ಲೋಕೇಶ್ ನೇಣಿಗೆ ಶರಣಾಗಿದ್ದಾನೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಪಿ ಡಾ.ಎ.ಎನ್.ಪ್ರಕಾಶ್ ಗೌಡ, ಅಮೂಲ್ಯ ಪ್ರಥಮ ಎಂಎಸ್ಸಿ ವ್ಯಾಸಂಗ ಮಾಡುತ್ತಿದ್ದಳು. ಲೋಕೇಶ್ ಸಿವಿಲ್ ಕಂಟ್ರಾಕ್ಟರ್ ಆಗಿದ್ದ ಎಂದಷ್ಟೇ ತಿಳಿದುಬಂದಿದೆ, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಆತ್ಮಹತ್ಯೆ ಮತ್ತು ಕೊಲೆಗೆ ಸದ್ಯಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ತಿಳಿಸಿದ್ದಾರೆ.