ಮೈಸೂರು: ಲೋಕಸಭಾ ಚುನಾವಣೆಯ ಉಮೇದುವಾರಿಕೆ ಸಲ್ಲಿಕೆ ಎರಡನೇ ದಿನವಾದಬುಧವಾರಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಪಕ್ಷೇತರ ಅಭ್ಯರ್ಥಿಗಳಾದ ಶ್ರೀನಿವಾಸಯ್ಯ ಹಾಗೂ ಪಿ.ಎಸ್.ಯಡೂರಪ್ಪ ಉಮೇದುವಾರಿಕೆ ಸಲ್ಲಿಸಿದ್ದು, ಇಬ್ಬರು ಅಭ್ಯರ್ಥಿಗಳು ಮಾಧ್ಯಮಗಳೊಂದಿಗೆ ಮಾತನಾಡಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ದುರಾಡಳಿತದಿಂದ ಬೇಸತ್ತು ಅವರನ್ನು ಈ ಬಾರಿ ಸೋಲಿಸಲು ಪಕ್ಷೇತರ ಅಭ್ಯರ್ಥಿಗಳಿಗೆ ಮತದಾರರು ಬೆಂಬಲ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ನಗರಸಭೆಯ ಪೇಟೆ ಬೀದಿ ಎಸ್.ಜೆ.ರಸ್ತೆ ನಿವಾಸಿ ನಿವೃತ್ತ ಸರ್ಕಾರಿ ನೌಕರ ಪಿ.ಎಸ್.ಯಡೂರಪ್ಪ ನಾಮಪತ್ರ ಸಲ್ಲಿಸಿದ್ದಾರೆ. 2014 ರಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ, 2017ರ ಗುಂಡ್ಲುಪೇಟೆ ವಿಧಾನ ಸಭೆ ಉಪ ಚುನಾವಣಾ ಕ್ಷೇತ್ರ ಹಾಗೂ 2018 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಡಿಕೇರಿ ವಿಧಾನ ಸಭಾ ಕ್ಷೇತ್ರ ಆಯ್ಕೆ ಬಯಸಿ ಸ್ಪರ್ಧೆಗಿಳಿದಿದ್ದರು.
ಯಡೂರಪ್ಪರೊಟ್ಟಿಗೆ ಚಾಮರಾಜ ಮೊಹಲ್ಲಾ ನಿವಾಸಿ (80) ಶ್ರೀನಿವಾಸಯ್ಯ ಪಕ್ಷೇತರರಾಗಿ ಜಿಲ್ಲಾ ಚುನಾವಣಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರಿಗೆ ನಾಮಪತ್ರ ಸಲ್ಲಿಸಿದರು.
ಈ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆ ನಾಮಪತ್ರ ಸಲ್ಲಿಕೆಗೆ ಎರಡನೇ ದಿನವಾದ ಬುಧವಾರ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಪಕ್ಷೇತರರ ಎರಡು ನಾಮಪತ್ರ ಸಲ್ಲಿಕೆಯಾದವು.