ಮೈಸೂರು: ಇಲ್ಲಿನ ನಂಜನಗೂಡು ತಾಲೂಕಿನ ಕೌಲಂದ ಹೋಬಳಿಯ ಹಳೇಪುರ ಕೆರೆ ಏರಿ ರಸ್ತೆ ಅಭಿವೃದ್ಧಿಯಾಗದೇ ಜನರು ಪರದಾಡುವಂತಾಗಿದೆ. ಕೆರೆ ಏರಿ ಮೂಲಕ ಹಳೇಪುರ ಗ್ರಾಮಕ್ಕೆ ತೆರಳುವ ವಾಹನಗಳು ಕೆರೆ ಏರಿ ರಸ್ತೆ ಹದಗೆಟ್ಟು ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಗೆ ಹಾಕಿದ್ದ ಜಲ್ಲಿ ಕಲ್ಲುಗಳು ಎದ್ದು ರಸ್ತೆಗಳಲ್ಲಿ ದೊಡ್ಡ ದೊಡ್ಡ ಹಳ್ಳಗಳು ನಿರ್ಮಾಣವಾಗಿವೆ.
ರಸ್ತೆಯ ದುರವಸ್ಥೆಯಿಂದಾಗಿ ಈ ಗ್ರಾಮದ ಜನರು ಸುಮಾರು 10 ಕಿಲೋ ಮೀಟರ್ ಸುತ್ತಿಬಳಸಿ ಗ್ರಾಮಕ್ಕೆ ಪ್ರಯಾಣ ಮಾಡಬೇಕಿದೆ. ಈ ರಸ್ತೆಯು ಗಟ್ಟವಾಡಿ, ನೇರಳೆ, ದೊಡ್ಡಕವಲಂದೆಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಾಗಿದೆ. ಆದರೂ ಈ ರಸ್ತೆ ಅಭಿವೃದ್ಧಿ ಮಾಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಇಲ್ಲಿನ ಕೆರೆಗಳಿಗೆ ನೀರು ತುಂಬಿಸಿದ ಫಲವಾಗಿ ರೈತರಿಗೆ ಅನುಕೂಲವಾಗಿದೆ. ಆದರೆ, ರಸ್ತೆ ಇಲ್ಲದೆ ಜಮೀನುಗಳಿಗೆ ತೆರಳಲು ರೈತರು ತೊಂದರೆ ಅನುಭವಿಸುವಂತಾಗಿದೆ. ಈ ಭಾಗದಲ್ಲಿ ಇದು ದೊಡ್ಡ ಕೆರೆಯಾಗಿದ್ದು, ಇಲ್ಲಿ ಹಲವು ಬಗೆಯ ಪ್ರಾಣಿ ಪಕ್ಷಿಗಳು ವಾಸಿಸುತ್ತವೆ. ಕೆರೆ ಏರಿ ರಸ್ತೆಯ ಎರಡೂ ಬದಿಯಲ್ಲೂ ಮುಳ್ಳಿನ ಪೊದೆ ಬೆಳೆದು ನಿಂತಿದ್ದು,ಕೆರೆಯ ಸೌಂದರ್ಯ ಹಾಳಾಗಿದೆ.
ಇನ್ನು ಹಳೇಪುರ ಕೆರೆಯನ್ನು ಪ್ರವಾಸಿ ತಾಣವನ್ನಾಗಿ ಮಾಡಬೇಕು. ಜೊತೆಗೆ ಕೆರೆಗೆ ತಡೆಗೋಡೆ ನಿರ್ಮಾಣ ಮಾಡಿ, ಕೆರೆ ಏರಿ ರಸ್ತೆ ಅಭಿವೃದ್ಧಿ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಲ್ಲಿ ಹಳೇಪುರ ಕೆರೆಗೆ ಮೊದಲನೇ ಹಂತದಲ್ಲೇ ನೀರು ತುಂಬಿಸಲಾಗಿದೆ. ಆದರೆ, ಕೆರೆ ಏರಿ ರಸ್ತೆ ಅಭಿವೃದ್ಧಿಪಡಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.
ಇದನ್ನೂ ಓದಿ : ಸಾವಿಗೆ ರಹದಾರಿಯಾದ ರಾಷ್ಟ್ರೀಯ ಹೆದ್ದಾರಿ 48: ತುಮಕೂರು ರಸ್ತೆಯಲ್ಲಿ ಸಾವಿರಾರು ಗುಂಡಿಗಳು