ಮೈಸೂರು : ಚಾಮುಂಡಿ ಬೆಟ್ಟದ ತಪ್ಪಲಿನ ಲಲಿತಾದ್ರಿಪುರ ಬಳಿ ನಡೆದಿರುವ ಗ್ಯಾಂಗ್ ರೇಪ್ ಪ್ರಕರಣದ ಬಗ್ಗೆ ಮಹಿಳಾ ಆಯೋಗ ಎಚ್ಚೆತ್ತುಕೊಂಡು ಸುಮೋಟೋ ಕೇಸ್ ದಾಖಲಿಸಿ ತನಿಖೆ ನಡೆಸಬೇಕು ಎಂದು ಕರ್ನಾಟಕ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಹಾಗೂ ಕೆಪಿಸಿಸಿ ವಕ್ತಾರೆ ಮಂಜುಳಾ ಮಾನಸ ಆಗ್ರಹಿಸಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಿನ್ನೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಗ್ಯಾಂಗ್ ರೇಪ್ ನಡೆದಿದ್ದು, ಬೆಳಗ್ಗೆ ಪ್ರಕರಣ ದಾಖಲಾಗಿದ್ದರೂ 3 ಗಂಟೆಗೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ಇನ್ನೂ ಆ್ಯಕ್ಟಿವ್ ಆಗಬೇಕು. ಸರ್ಕಾರ ಕೂಡಾ ಚುರುಕಾಗಬೇಕು ಎಂದರು.
ಪೊಲೀಸರು ಏನ್ ಮಾಡ್ತಿದ್ದಾರೆ?
ಬೊಮ್ಮಾಯಿ ಅವರು ಗೃಹ ಸಚಿವರಾಗಿ ಕೆಲಸ ಮಾಡಿ, ಈಗ ಮುಖ್ಯಮಂತ್ರಿಗಳಾಗಿದ್ದಾರೆ. ಮೊನ್ನೆ ಧ್ರುವನಾರಾಯಣ್ ಆರ್ಎಸ್ಎಸ್ ಅನ್ನು ತಾಲಿಬಾನ್ಗೆ ಹೋಲಿಕೆ ಮಾಡಿದಾಗ ಗಲಾಟೆ ಮಾಡಿದರು. ಈಗ ತಾಲಿಬಾನಿಗಿಂತ ಕೆಟ್ಟದಾಗುತ್ತಿದೆ. ಹೆಣ್ಣು ಮಕ್ಕಳ ಮೇಲೆ ಗ್ಯಾಂಗ್ ರೇಪ್ ಆಗುತ್ತಿದೆ ಎಂದರೆ ಏನಿದರ ಅರ್ಥ? ಎಂದು ಪ್ರಶ್ನಿಸಿದರು. ಮೊನ್ನೆ ದರೋಡೆಯಾಗಿ, ಅಮಾಯಕನ ಹತ್ಯೆಯಾಗಿದೆ. ಇನ್ನೂ ಆರೋಪಿಗಳನ್ನು ಪತ್ತೆ ಹಚ್ಚಿಲ್ಲ. ಪೊಲೀಸ್ ಅಧಿಕಾರಿಗಳು, ಸರ್ಕಾರ ಮಲಗಿಬಿಟ್ಟಿದೆ ಎಂದು ಹರಿಹಾಯ್ದರು.
ಚುನಾವಣೆ ಗೆಲ್ಲೋದಲ್ಲ, ಪ್ರಕರಣ ಗಂಭೀರವಾಗಿ ಪರಿಗಣಿಸಿ
ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಆ ಹೆಣ್ಣು ಮಗಳು ಎಂಬಿಎ ವಿದ್ಯಾರ್ಥಿಯಾಗಿ ಆ ರಾತ್ರಿಯಲ್ಲಿ ಯಾಕೆ ಬಂದಿದ್ದಳು ತಿಳಿದಿಲ್ಲ. ಅದು ಕೂಡ ತಪ್ಪೇ. ಬಿಜೆಪಿ ಮೇಯರ್ ಚುನಾವಣೆಯಲ್ಲಿ ಗೆದ್ದೆವು ಎಂದು ಬಾವುಟ ಹಾರಿಸಿದರೆ ಸಾಲದು, ಪೊಲೀಸ್ ಅಧಿಕಾರಿಗಳಿಗೆ ಚಾಟಿ ಬೀಸಿ, ಸರ್ಕಾರ ನಿದ್ದೆಯಿಂದ ಎದ್ದು, ಉಳಿದ ದಿನಗಳಲ್ಲಾದರೂ ನಾಗರಿಕರು ನೆಮ್ಮದಿಯಾಗಿ ಬದುಕಲು ಅವಕಾಶ ಕಲ್ಪಿಸಿಕೊಡಲಿ. ಇಂತಹ ಹೀನ ಪ್ರಕರಣಗಳು ಯಾವ ಊರಲ್ಲೂ ನಡೆಯಬಾರದು ಎಂದರು.
ಇದನ್ನೂ ಓದಿ : ಮೈಸೂರು: ಸ್ನೇಹಿತನ ಜೊತೆ ಚಾಮುಂಡಿ ಬೆಟ್ಟಕ್ಕೆ ತೆರಳಿದ್ದ ವಿದ್ಯಾರ್ಥಿನಿ ಮೇಲೆ Gangrape
ಅಪರಾಧಿಗಳು ಯಾರೆಂದು ಗೊತ್ತಾಗಿದೆ ಎಂದು ತಿಳಿದು ಬಂದಿದೆ. ಅಪರಾಧಿಗಳು ಸಿಕ್ಕಿದ ಮೇಲೆ, ದೂರು ದಾಖಲಾದ ಮೇಲೆ, ಮಾಧ್ಯಮಗಳಲ್ಲಿ ಸುದ್ದಿ ಬಂದ ತಕ್ಷಣವೇ ಮಹಿಳಾ ಆಯೋಗ ಎಚ್ಚೆತ್ತುಕೊಂಡು ಸುಮೋಟೋ ಕೇಸ್ ದಾಖಲಿಸಿ, ತನಿಖೆಗೆ ಚಾಲನೆ ಕೊಡಬೇಕು ಎಂದರು.
ನಗರ ವ್ಯಾಪ್ತಿಯಾದರೆ ಪೊಲೀಸ್ ಆಯುಕ್ತರೊಂದಿಗೆ ಮಾತನಾಡಿ, ಸುಮೋಟೋ ಪ್ರಕರಣ ದಾಖಲಿಸಬೇಕು. ಮಹಿಳೆಯರ ಮೇಲೆ ನಡಯುತ್ತಿರುವ ದೌರ್ಜನ್ಯವನ್ನು ಬೊಮ್ಮಾಯಿ ಅವರು ಖಂಡಿಸಬೇಕು. ಯಾವುದೇ ಸರ್ಕಾರವಿದ್ದರೂ ಮಹಿಳೆಯರ ಪರವಾಗಿ ಕೆಲಸ ಮಾಡಬೇಕು. ಇಲ್ಲವಾದಲ್ಲಿ ರಾಜೀನಾಮೆ ನೀಡಿ ಮನೆಗೆ ಹೋಗಬೇಕು ಎಂದು ಮಂಜುಳಾ ಮಾನಸಾ ಒತ್ತಾಯಿಸಿದರು.