ಮೈಸೂರು: ಪ್ರಸಕ್ತ ಸಾಲಿನ ಮೈಸೂರು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಮೈಸೂರಿನ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಸಮಗ್ರ ಚಾಂಪಿಯನ್‍ಶಿಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ನಗರದ ಜಿಲ್ಲಾ ಪೊಲೀಸ್ ಕ್ರೀಡಾಂಗಣದಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟದಲ್ಲಿ 91 ಅಂಕ ಗಳಿಸುವ ಮೂಲಕ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಸಮಗ್ರ ಚಾಂಪಿಯನ್‍ಶಿಪ್ ಪ್ರಶಸ್ತಿ ಗಳಿಸಿದ್ದು ಉತ್ತಮ ಕ್ರೀಡಾ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ಕ್ರೀಡಾಕೂಟದಲ್ಲಿ ಉತ್ತಮ ಪುರುಷ ಕ್ರೀಡಾಪಟು ಪ್ರಶಸ್ತಿಯನ್ನು ಮೈಸೂರಿನ ಜಿಲ್ಲಾ ಪೊಲೀಸ್ ಪಡೆಯ ಜಿ.ಜಿ.ರಘುನಂದನ (ಎಪಿಸಿ149) ಅವರು ಗಳಿಸಿದರೆ, ವರುಣಾ ಪೊಲೀಸ್ ಠಾಣೆಯ ಎಸ್.ಸುಮಾ (ಮಪಿಸಿ 476) ಅವರು ಉತ್ತಮ ಮಹಿಳಾ ಕ್ರೀಡಾಪಟು ಪ್ರಶಸ್ತಿಯನ್ನು ಗಿಟ್ಟಿಸಿಕೊಂಡರು. ಮೋಗ್ ಗಾಲ್ಫ್ ಆಟದಲ್ಲಿ ಅಡಿಷನಲ್ ಎಸ್‍ಪಿ ಪಿ.ವಿ.ಸ್ನೇಹ ಪ್ರಥಮ ಸ್ಥಾನ ಪಡೆದರೆ, ಜಿಲ್ಲಾ ಪೊಲೀಸ್ ವರಿಷ್ಠರಾದ ಸಿ.ಬಿ.ರಿಷ್ಯಂತ್ ದ್ವಿತೀಯ ಸ್ಥಾನ ಪಡೆದುಕೊಂಡರು.
ಜಿಲ್ಲಾ ಪೊಲೀಸ್ ವರಿಷ್ಠರಾದ ಸಿ.ಬಿ.ರಿಷ್ಯಂತ್ ಮಾತನಾಡಿ, ದಿನನಿತ್ಯo ಕರ್ತವ್ಯದಲ್ಲಿ ನಿರತರಾಗುವ ಸಿಬ್ಬಂದಿಗೆ ವಿಶ್ರಾಂತಿ ನೀಡಲು ವಾರ್ಷಿಕ ಪೊಲೀಸ್ ಕ್ರೀಡಾಕೂಟ ಆಯೋಜಿಸಲಾಗಿದೆ. ಪ್ರತಿಯೊಬ್ಬ ಸಿಬ್ಬಂದಿಯೂ ಕೂಡಾ ಉತ್ಸಾಹದಿಂದ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಇದೇ ರೀತಿ ಮುಂದಿನ ದಿನಗಳಲ್ಲಿ ಭಾಗವಹಿಸಬೇಕು ಎಂದರು.