ಮೈಸೂರು : ವೀಕೆಂಟ್ ಕರ್ಫ್ಯೂ ಬೇಡ ಎನ್ನುತ್ತಿರುವ ವರ್ತಕರು ನನಗೆ ಎರಡು ದಿನ ಕಾಲಾವಕಾಶ ಕೊಡಿ, ಸಿಎಂ ಜೊತೆ ಈ ವಿಚಾರದಲ್ಲಿ ಚರ್ಚೆ ಮಾಡಿ ನಿಯಮ ಸಡಿಲ ಮಾಡುವಂತೆ ಮನವಿ ಮಾಡುತ್ತೇನೆ ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಹೇಳಿದರು.
ವೀಕೆಂಡ್ ಕರ್ಫ್ಯೂಗೆ ಸಹಕರಿಸಲ್ಲ ಎಂಬ ಸಂಘ-ಸಂಸ್ಥೆಗಳ ಒಕ್ಕೂಟದ ನಿರ್ಧಾರ ವಿಚಾರವಾಗಿ ಜಿಪಂ ಕಚೇರಿ ಮುಂಭಾಗ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವರ್ತಕರು ನಾಳೆಯ ವೀಕೆಂಡ್ ಕರ್ಫ್ಯೂಗೆ ಸಹಕರಿಸಬೇಕು. ಸರ್ಕಾರದ ಆದೇಶ ಉಲ್ಲಂಘನೆ ಮಾಡುತ್ತೇವೆ ಎಂದು ಹೇಳುವುದು ಸರಿಯಲ್ಲ.
ತಜ್ಞರ ಅಭಿಪ್ರಾಯದಂತೆ ಸರ್ಕಾರ ಆದೇಶ ಜಾರಿ ಮಾಡಿದೆ. ಮೈಸೂರಲ್ಲಿ ಪಾಸಿಟಿವ್ ರೇಟ್ ಕಡಿಮೆ ಇದ್ದರೂ ಗಡಿ ಜಿಲ್ಲೆಯಾದ ಕಾರಣ ಕರ್ಫ್ಯೂ ಜಾರಿ ಮಾಡಲಾಗಿದೆ. ಆದರೆ, ಜನರು ವಾರಾಂತ್ಯ ಕರ್ಫ್ಯೂ ಸಡಲಿಕೆ ಮಾಡಲು ಮನವಿ ಮಾಡುತ್ತಿದ್ದಾರೆ. ಕರ್ಫ್ಯೂ ಕುರಿತ ಜನರ ಅಭಿಪ್ರಾಯವನ್ನು ಸಿಎಂ ಗಮನಕ್ಕೆ ತರುತ್ತೇನೆ ಎಂದು ಹೇಳಿದರು.
ದಸರಾ ಆಚರಣೆ ನಿಶ್ಚಿತ : ಈ ಬಾರಿ ಸರಳವಾಗಿ ದಸರಾ ಮಾಡುತ್ತೇವೆ, ಯಾವ ರೀತಿ ಮಾಡಬೇಕೆಂದು ಸಿಎಂ ಜೊತೆ ಸೋಮವಾರ ದಸರಾ ಉನ್ನತಮಟ್ಟದ ಸಭೆ ಮಾಡುತ್ತೀವಿ. ದಸರಾ ಮಾಡುವುದಂತೂ ನಿಶ್ಚಿತ.
ಕಳೆದ ಬಾರಿಯಂತೆ ಸರಳವಾಗಿ ಮಾಡಬೇಕೋ ಅಥವಾ ಇನ್ನೂ ಬೇರೆ ಮಾರ್ಪಾಡು ಮಾಡಿಕೊಳ್ಳಬೇಕೋ ಎಂಬುದು ಚರ್ಚೆ ಮಾಡುತ್ತೇವೆ. ಕಳೆದ ಬಾರಿ ದಸರಾಗೆ ಬಿಡುಗಡೆಯಾದ ಅನುದಾನದಲ್ಲಿ 7 ಕೋಟಿ ರೂ. ಉಳಿದಿದೆ. ಅದೇ ಅನುದಾನ ಬಳಸಿ ದಸರಾ ಮಾಡುತ್ತೇವೆ ಎಂದರು.
ಕೋವಿಡ್ 3ನೇ ಅಲೆ ಎದುರಿಸಲು ಜಿಲ್ಲಾಡಳಿತ ಸನ್ನದ್ಧ : ಸಂಭಾವ್ಯ ಕೋವಿಡ್ 3ನೇ ಅಲೆ ಮಕ್ಕಳಿಗೆ ಕಾಣಿಸಿಕೊಳ್ಳುತ್ತದೆ ಎಂಬ ತಜ್ಞರ ಸಲಹೆಯಂತೆ ಚೆಲುವಾಂಬ ಆಸ್ಪತ್ರೆಯನ್ನು ಸಂಪೂರ್ಣವಾಗಿ ಮಕ್ಕಳಿಗಾಗಿ ಮೀಸಲಿಡಲಾಗಿದೆ. ಇದನ್ನು ನಿಯಂತ್ರಿಸಲು ಸರ್ಕಾರವು ನಾನಾ ರೀತಿ ಪ್ರಯತ್ನಿಸುತ್ತಿದೆ.
ಕೋವಿಡ್ ಬಗ್ಗೆ ಜನರಿಗೆ ಮಾಧ್ಯಮದ ಮುಖಾಂತರ ಜಾಗೃತಿಯನ್ನು ವೈದ್ಯಾಧಿಕಾರಿಗಳು ಮೂಡಿಸುತ್ತಿದ್ದಾರೆ. ಜನರು ಯಾವುದೇ ಕಾರಣಕ್ಕೂ ಹೆದರುವ ಅವಶ್ಯಕತೆ ಇಲ್ಲ. ಮೈಸೂರು ಜನತೆ ಕೋವಿಡ್ ಮೊದಲ ಅಲೆಯಲ್ಲಿ ಹಾಗೂ ಎರಡನೆ ಅಲೆಯಲ್ಲಿ ಸರ್ಕಾರದ ನಿಯಮಗಳಿಗೆ ಉತ್ತಮವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.
ಓದಿ : ವೀಕೆಂಡ್ ಕರ್ಫ್ಯೂ ಉಲ್ಲಂಘಿಸಿದರೆ ಟ್ರೇಡ್ ಲೈಸೆನ್ಸ್ ರದ್ದು : ಕೋವಿಡ್ 2ನೇ ಅಲೆಯ ಸಂದರ್ಭದಲ್ಲಿ ಹೆಚ್ಚು ಜನರು ಸಣ್ಣ ಜ್ವರ ಕಾಣಿಸಿದರೂ ಭಯದಿಂದ ಕೂಡಲೇ ಆಕ್ಸಿಜನ್ ಬೆಡ್, ರೆಮ್ಡಿಸಿವಿರ್ ಔಷಧಿ ಕೇಳುತ್ತಿದ್ದರು.
ಹೀಗಾಗಿ, ಅವರ ಭಯವನ್ನು ಕಡಿಮೆ ಮಾಡುವ ಕೆಲಸವಾಗಬೇಕು. ಜಿಲ್ಲೆಯಲ್ಲಿ 5 ಸಾವಿರ ಕೋವಿಡ್ ಪ್ರಕರಣಗಳು ಒಟ್ಟಿಗೆ ಬಂದರೂ ಅದನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ ಎಂದರು.
ಗಡಿಯಲ್ಲಿ ಮುನ್ನೆಚ್ಚರಿಕೆ : ಮೈಸೂರು ಜಿಲ್ಲೆಯ ಗಡಿಭಾಗದ ಹಳ್ಳಿಗಳಲ್ಲಿ ಶೇ.80ರಷ್ಟು ಲಸಿಕೆ ನೀಡಲಾಗಿದೆ. ಶೇ.100ರಷ್ಟು ಲಸಿಕೆ ನೀಡುವಂತೆ ಸೂಚಿಸಲಾಗಿದೆ. ಜಿಲ್ಲೆಯ ಅಕ್ಕಪಕ್ಕದ ರಾಜ್ಯಗಳಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುತ್ತಿವೆ.
ಇದರಿಂದ ಅಕ್ಕಪಕ್ಕದ ರಾಜ್ಯದ ಜನರಿಂದ ಕೋವಿಡ್ ಹೆಚ್ಚಾಗಬಾರದೆಂಬ ಕಾರಣದಿಂದ ಹೊರ ರಾಜ್ಯದಿಂದ ಬರುವವರು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ವರದಿ ತರುವ ಮೂಲಕ ಜಿಲ್ಲೆಯೊಳಗೆ ಬರಬೇಕಿದೆ ಎಂದರು.