ಮೈಸೂರು: ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಸಾಮಾನ್ಯ ರೋಗಿಗಳ ಮಧ್ಯೆ ಕೊರೊನಾ ಸೋಂಕಿತನಿಗೆ ಚಿಕಿತ್ಸೆಯ ಬಗ್ಗೆ ವೈರಲ್ ಆದ ವಿಡಿಯೋ ಕುರಿತು ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿದ್ದಾರೆ.
ಘಟನೆ ವಿವರ...
ನಗರದ ಸರ್ಕಾರಿ ಕೆ.ಆರ್. ಆಸ್ಪತ್ರೆಯ ಆವರಣದಲ್ಲಿರುವ ಹಳೆಯ ಜಯದೇವ ಆಸ್ಪತ್ರೆಯ ಕಟ್ಟಡದಲ್ಲಿ ಸಾಮಾನ್ಯ ರೋಗಿಗಳ ವಾರ್ಡ್ನಲ್ಲಿ ಕೊರೊನಾ ಸೋಂಕಿತರನ್ನು ಇರಿಸಲಾಗಿದ್ದು, ಈ ಬಗ್ಗೆ ಸಾಮಾನ್ಯ ರೋಗಿಯ ಸಂಬಂಧಿಕರು ಮತ್ತು ಇತರರಿಗೆ ಸೋಂಕು ಸುಲಭವಾಗಿ ಹರಡುತ್ತದೆ ಎಂದು ವಿಡಿಯೋ ಮಾಡಿ ಕೆಲವರು ಅದನ್ನು ಹರಿಬಿಟ್ಟಿದ್ದರು.
ಈ ಬಗ್ಗೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸ್ಪಷ್ಟನೆ ನೀಡಿ, ಕೆ.ಆರ್.ಆಸ್ಪತ್ರೆ ಮಾತ್ರ ಅಲ್ಲ, ಇತರ ನಾನ್ ಕೋವಿಡ್ ಆಸ್ಪತ್ರೆಗಳಲ್ಲೂ ಅತಿ ಹೆಚ್ಚು ಉಸಿರಾಟದ ತೊಂದರೆ ಇರುವ ರೋಗಿಗಳು ಪ್ರತಿದಿನ 50 ರಿಂದ 60 ಜನ ಬರುತ್ತಾರೆ. ಅಷ್ಟು ಜನರಿಗೆ ಟೆಸ್ಟ್ ಆಗುತ್ತದೆ. ಇದರಲ್ಲಿ ಒಂದು ಅಥವಾ ಎರಡು ಪಾಸಿಟಿವ್ ಬರುತ್ತವೆ. ಪಾಸಿಟಿವ್ ಬಂದ ನಂತರ ಶಿಫ್ಟ್ ಮಾಡಲಾಗುತ್ತದೆ. ಅದರಲ್ಲಿ ಸ್ವಲ್ಪ ತಡವಾಗಲಿದೆ ಎಂದು ಡಿಸಿ ಹೇಳಿದ್ದಾರೆ.
ಕೆ.ಆರ್. ಆಸ್ಪತ್ರೆ ಹಾಗೂ ಚೆಲುವಾಂಬ ಆಸ್ಪತ್ರೆಗಳನ್ನು ಕೋವಿಡ್ ಕೇರ್ ಫೆಸಿಲಿಟಿ ಆಸ್ಪತ್ರೆಗಳು ಎಂದು ಘೋಷಣೆ ಮಾಡಿಲ್ಲ ಮತ್ತು ಮಾಡುವುದೂ ಇಲ್ಲ. ಇಲ್ಲಿಗೆ ಸಾಮಾನ್ಯ ರೋಗಿಗಳು ಬರುವುದರಿಂದ ಇದನ್ನು ಕೋವಿಡ್ ಆಸ್ಪತ್ರೆ ಎಂದು ಘೋಷಣೆ ಮಾಡಲ್ಲ. ಜನ ಈ ವಿಡಿಯೋ ನೋಡಿ ಭಯ ಪಡಬೇಕಾಗಿಲ್ಲ ಎಂದು ವೈರಲ್ ಆದ ವಿಡಿಯೋ ಬಗ್ಗೆ ಜಿಲ್ಲಾಧಿಕಾರಿ ವಿವರಣೆ ನೀಡಿದ್ದಾರೆ.