ಮೈಸೂರು: ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಒಂದು ತಿಂಗಳು ಮತ್ತೆ ಲಾಕ್ಡೌನ್ ಮಾಡಿ, ಜಿಲ್ಲೆಗೆ ಸಂಪರ್ಕಿಸುವ ಅಂತರ್ ರಾಜ್ಯ, ಅಂತರ್ ಜಿಲ್ಲೆಗಳ ಸಂಪರ್ಕ ಬಂದ್ ಮಾಡಬೇಕು ಎನ್ನುವ ಕೂಗು ಕೇಳಿ ಬರುತ್ತಿದೆ.
ಹೌದು, ಮೈಸೂರಿನಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಅಲ್ಲದೇ ಕಂಟೇನ್ಮೆಂಟ್ ಝೋನ್ಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇದರ ಮಧ್ಯದಲ್ಲಿ ಮಹಾರಾಷ್ಟ್ರ, ರಾಜಸ್ಥಾನ ಇತರೆ ರಾಜ್ಯಗಳಿಂದ ಹಾಗೂ ಬೆಂಗಳೂರಿನಿಂದ ಹೆಚ್ಚು ಜನ ಬರುತ್ತಿರುವುದರಿಂದ ಮೈಸೂರಿನಲ್ಲಿ ಕೊರೊನಾ ಹಾವಳಿ ಹೆಚ್ಚಾಗುತ್ತಿದೆ. ಲಾಕ್ಡೌನ್ ಸಡಿಲಗೊಂಡ ನಂತರವಂತೂ ಎಸ್ಎಆರ್ಐ, ಐಎಲ್ಐ ಪ್ರಕರಣಗಳು ಹೆಚ್ಚಾಗುತ್ತಿವೆ.
ಹೀಗೆ ದಿನೇ ದಿನೇ ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆ ಮೈಸೂರಿಗೆ ಸಂಪರ್ಕಿಸುವ ಅಂತರ್ ಜಿಲ್ಲೆ ಹಾಗೂ ಅಂತರ್ ರಾಜ್ಯಗಳ ಗಡಿ ಬಂದ್ ಮಾಡಿ, ಕೊರೊನಾ ನಿಯಂತ್ರಣಕ್ಕೆ ತನ್ನಿ ಎನ್ನುವ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.