ಮೈಸೂರು: ನಕಲಿ ದಾಖಲೆ ಸೃಷ್ಟಿಸಿ ವಾಹನ ಸಾಲ ಪಡೆದು ಚೋಳಮಂಡಲಂ ಫೈನಾನ್ಸ್ ಕಂಪನಿಗೆ ಒಂದು ಕೋಟಿಗೂ ಅಧಿಕ ಹಣ ಸಾಲ ಪಡೆದು ವಂಚಿಸಿದ್ದ 15 ಮಂದಿ ಖದೀಮರನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಚೋಳಮಂಡಲಂ ಫೈನಾನ್ಸ್ನಲ್ಲಿ 10 ಲಾರಿಗಳ ಮೇಲೆ ಒಟ್ಟು 1 ಕೋಟಿ 35 ಲಕ್ಷ 53 ಸಾವಿರ ರೂ. ವಾಹನ ಸಾಲ ಪಡೆದಿದ್ದರು. ಕೆಲವು ತಿಂಗಳು ಸಾಲದ ಮಾಸಿಕ ಕಂತು ಕಟ್ಟಿದ್ದರು. ಬಳಿಕ ಸಾಲದ ಮಾಸಿಕ ಕಂತು ನಿಲ್ಲಿಸಿದ್ದರು. ಈ ವೇಳೆ ಲಾರಿ ವಶಕ್ಕೆ ಪಡೆಯಲು ಹೋದ ಫೈನಾನ್ಸ್ ಕಂಪನಿಯ ಸಿಬ್ಬಂದಿಗೆ ಅವಾಚ್ಯ ಶಬ್ದದಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದರು. ಅಲ್ಲದೇ ಲಾರಿಗಳ ಇಂಜಿನ್, ಚಾರ್ಸಿ ನಂಬರ್ ಪಂಚಿಂಗ್ ಮಾಡಿ ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಈ ಬಗ್ಗೆ ಚೋಳಮಂಡಲಂ ಫೈನಾನ್ಸ್ ಮ್ಯಾನೇಜರ್ ವಿಜಯ್ ಎಂಬುವವರು ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ದೂರುದಾಖಲಿಸಿಕೊಂಡಿದ್ದ ದೇವರಾಜ ಠಾಣೆ ಪೊಲೀಸರು, ಪಕ್ರರಣ ಸಂಬಂಧ ಸುಮಾರು 15 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ತನಿಖೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಖದೀಮರು ಲಾರಿ ಇಲ್ಲದೆಯೇ ಆಂಧ್ರಪ್ರದೇಶದ ವಿವಿಧ RTO ಕಚೇರಿಯಲ್ಲಿ ಆರ್ಸಿ ಮಾಡಿಸಿ ನಂತರ ವರ್ಗಾವಣೆ ದಾಖಲಾತಿ ಸೃಷ್ಟಿಸಿ ಮರು ನೋಂದಣಿಗೆ ಸ್ಥಳೀಯ ನಕಲಿ ವಿಳಾಸದ ದಾಖಲೆ ಸಲ್ಲಿಸುತ್ತಿದ್ದರು. ಪರಿಶೀಲನೆಗೆ ಲಾರಿ ಹಾಜರುಪಡಿಸದೆ ಆರ್ಸಿ ಕಾರ್ಡ್ ಅನ್ನು ಖದೀಮರು ಪಡೆಯುತ್ತಿದ್ದು, ಬರೋಬ್ಬರಿ 200 ಆರ್ಸಿ ಕಾರ್ಡ್ ಮಾಡಿಸಿರುವ ಬಗ್ಗೆ ತನಿಖೆ ವೇಳೆ ಬಹಿರಂಗವಾಗಿದೆ.
ಬಂಧಿತರಿಂದ ಸುಮಾರು 7 ಲಾರಿ, 2 ಕಾರು, 1 ಬೈಕ್, 2 ಲ್ಯಾಪ್‌ಟಾಪ್ ಸೇರಿ ಅನೇಕ ದಾಖಲೆ ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಮಾಹಿತಿ ನೀಡಿದ್ದಾರೆ.