ಮೈಸೂರು: ಅನಾರೋಗ್ಯದಿಂದ ಮೃತಪಟ್ಟ ಹಿಂದೂ ವ್ಯಕ್ತಿಯ ಅಂತ್ಯ ಸಂಸ್ಕಾರವನ್ನು ಹಿಂದೂ ಸಂಪ್ರದಾಯದಂತೆಯೇ ಮುಸ್ಲಿಂ ಸಾಮಾಜಿಕ ಸಂಘಟನೆಯ ಸ್ನೇಹಿತರ ಗುಂಪು ನೆರವೇರಿಸಿ, ಮಾನವ ಧರ್ಮದ ಸಂದೇಶವನ್ನು ಸಾರಿದ್ದಾರೆ.
ನಗರದ ಕೆಸರೆಯ ನಿವಾಸಿಯಾದ ಲಿಂಗಣ್ಣ (65) ಇವರು ಅನಾರೋಗ್ಯದಿಂದ ಶನಿವಾರ ಮೃತಪಟ್ಟಿದ್ದಾರೆ. ಆದರೆ ಅವರ ಅಂತ್ಯಕ್ರಿಯೆ ನಡೆಸಲು ಶಕ್ತವಲ್ಲದ ಕುಟುಂಬಸ್ಥರು ದಾರಿ ಕಾಣದಂತಾಗಿದ್ದರು. ಪರಿಚಿತರೊಬ್ಬರು ಮುಸ್ಲಿಂ ಸಂಘಟನೆಯ ಸಹಕಾರ ಕೇಳಿದ್ದಾರೆ. ಮೊದಲಿಗೆ ಹಣ ನೀಡಿದ ಸಂಘಟನೆಯವರು, ಕುಟುಂಬದ ಸ್ಥಿತಿಯನ್ನು ಕಂಡು ತಾವೇ ಮುಂದೆ ನಿಂತು ಹಿಂದೂ ಸಂಪ್ರದಾಯದಂತೆ ಗಣೇಶ ನಗರದ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಿದ್ದಾರೆ.
ಮೃತಪಟ್ಟ ಲಿಂಗಣ್ಣ ಅವರಿಗೆ ಪತ್ನಿ, ಮಗಳು ಹಾಗೂ ಒಬ್ಬ ಮಗನಿದ್ದು, ಈ ಕುಟುಂಬವನ್ನ ಲಿಂಗಣ್ಣನವರೇ ಸಲಹುತ್ತಿದ್ದರು. ಮನೆಯ ಯಜಮಾನನನ್ನು ಕಳೆದುಕೊಂಡ ಕುಟುಂಬಕ್ಕೆ ಈಗ ದಾರಿ ಕಾಣದಂತಾಗಿದೆ. ಇವರ ಮಗ 8 ನೇ ತರಗತಿಯಲ್ಲಿ ಓದುತ್ತಿದ್ದು, ಅವನ ಮುಂದಿನ ವಿದ್ಯಾಭ್ಯಾಸದ ವೆಚ್ಚವನ್ನು ತಾವೇ ಭರಿಸುತ್ತೇವೆ ಎಂದು ಸಂಘಟನೆಯವರು ಕುಟುಂಬಕ್ಕೆ ಅಭಯ ನೀಡಿದ್ದಾರೆ.
ಕೇರ್ ಸೋಷಿಯಲ್ ಫೌಂಡೇಶನ್ ಸಂಘಟನೆಯ ಸದಸ್ಯರು ಹಾಗೂ ಅನಾಥ ಶವಗಳಿಗೆ ಮುಕ್ತಿ ನೀಡುವ ಐಯೂಬ್ ಅಹಮ್ಮದ್ ಖಾನ್ ಸೇರಿದಂತೆ ಇತರ ಸದಸ್ಯರು ಈ ಮಾನವೀಯ ಕಾರ್ಯದಲ್ಲಿ ಭಾಗಿಯಾಗಿದ್ದರು.