ಮೈಸೂರು: ಮನೆ ಮುಂದಿನ ರಸ್ತೆಯಲ್ಲಿ ಸ್ಕೂಟರ್ ವ್ಹೀಲಿಂಗ್ ಮಾಡ್ಬೇಡಿ ಎಂದು ಬುದ್ಧಿವಾದ ಹೇಳಿದ್ದಕ್ಕೆ ಯುವಕನೊಬ್ಬನನ್ನು 10 ಜನರ ತಂಡ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಿ.ನರಸೀಪುರ ತಾಲೂಕಿನ ಕೇತುಪುರ ಗ್ರಾಮದಲ್ಲಿ ನಡೆದಿದೆ.
ಸಿದ್ದರಾಜು (26) ಕೊಲೆಯಾದ ಯುವಕ. ಮನೆ ಮುಂದಿನ ರಸ್ತೆಯಲ್ಲಿ ವ್ಹೀಲಿಂಗ್ ಮಾಡುತ್ತಾ ಕಿರಿ ಕಿರಿ ಉಂಟು ಮಾಡುತ್ತಿದ್ದ ಪುಂಡರಿಗೆ ಸಿದ್ದರಾಜು ಬುದ್ಧಿವಾದ ಹೇಳಿದ್ದ. ಇದೇ ವಿಚಾರಕ್ಕೆ ಎರಡು ದಿನದ ಹಿಂದೆ ಗಲಾಟೆ ನಡೆದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಶನಿವಾರ ರಾತ್ರಿ ಗುಂಪು ಕಟ್ಟಿಕೊಂಡು ಏಕಾಏಕಿ ದಾಳಿ ನಡೆಸಿದ ಯುವಕರು, ಕಣ್ಣಿಗೆ ಖಾರದಪುಡಿ ಎರಚಿ ಮಚ್ಚಿನಿಂದ ಸಿದ್ದರಾಜು ಮೇಲೆ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಸಿದ್ದರಾಜು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಗಲಾಟೆ ತಡೆಯಲು ಹೋದ ಮೃತನ ಚಿಕ್ಕಪ್ಪನ ಮೇಲೂ ಹಲ್ಲೆ ಮಾಡಲಾಗಿದೆ.
ಘಟನೆ ನಂತರ ಆರೋಪಿಗಳು ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಬನ್ನೂರು ಠಾಣೆ ಪೊಲೀಸರು ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ. ಮಗನನ್ನು ಕಳೆದುಕೊಂಡ ಸಿದ್ದರಾಜು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.