ಮೈಸೂರು: ಸೋದರ ಮಾವನನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮರಾಜನಗರ ಪೊಲೀಸ್ ಠಾಣೆಯ ಕಾನ್ಸ್‌ಟೆಬಲ್‌ವೊಬ್ಬರನ್ನು ವರುಣ ಠಾಣಾ ಪೊಲೀಸರು ಬಂಧಿಸಿದ್ದಾರೆ. ಚಾಮರಾಜನಗರ ಸಶಸ್ತ್ರ ಮೀಸಲು ಪಡೆಯ ಕಾನ್ಸ್‌ಟೆಬಲ್ ಮಹೇಶ್ ಬಂಧಿತ ಆರೋಪಿ. ಕೃತ್ಯಕ್ಕೆ ಸಹಕರಿಸಿದ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಇನ್ನೋರ್ವ ತಲೆಮರೆಸಿಕೊಂಡಿದ್ದಾನೆ.
ಮಹೇಶ್ ಹಾಗೂ ಆತನ ಸಂಗಡಿಗರು ಸೇರಿ ನಂಜನಗೂಡು ನಿವಾಸಿಯಾಗಿರುವ ನಿವೃತ್ತ ಶಿಕ್ಷಕ ನಾಗರಾಜು ಎಂಬವರನ್ನು ಅಪಹರಿಸಿ, ವರುಣ ಠಾಣಾ ವ್ಯಾಪ್ತಿಯಲ್ಲಿ ಕಾರಿನೊಳಗೆ ಕೊಲೆಗೈದು ಶವವನ್ನು ಕೂಡನಹಳ್ಳಿ ಸಮೀಪದ ರಸ್ತೆಯಲ್ಲಿ ಬಿಸಾಡಿ ಹೋಗಿದ್ದರು.
ಪೊಲೀಸರಿಗೆ ದೊರೆತ ಶವ ಮೇಲ್ನೋಟಕ್ಕೆ ಕೊಲೆಯಾದಂತೆ ಕಂಡುಬಂದಿದ್ದರಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪರಿಶೀಲಿಸಿದಾಗ ಆರೋಪಿಗಳ ಜಾಡು ಸಿಕ್ಕಿತ್ತು. ಸ್ತ್ರೀ ವ್ಯಾಮೋಹವೇ ಸೋದರ ಮಾವನ ಕೊಲೆಗೆ ಕಾರಣ ಎಂದು ತಿಳಿದುಬಂದಿದೆ. ಸೋದರ ಮಾವನ ಮಗಳನ್ನು ಮಹೇಶ್ ಇಷ್ಟಪಡುತ್ತಿದ್ದ. ಆಕೆಗೆ ಈತನ ಬಗ್ಗೆ ಒಲವಿರಲಿಲ್ಲ. ಈ ನಡುವೆ ವಿವಾಹವಾಗಿ ವಿದೇಶಕ್ಕೆ ಹೋಗುತ್ತಿದ್ದಾಳೆ ಎಂಬ ಮಾಹಿತಿ ಮಹೇಶ್‌ಗೆ ದೊರೆತಿತ್ತು ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಮಾವನನ್ನು ಕೊಲೆ ಮಾಡಿದರೆ, ಆಕೆ ವಿದೇಶಕ್ಕೆ ಹೋಗುವುದನ್ನು ತಪ್ಪಿಸಬಹುದು ಎಂಬ ಆಲೋಚನೆ ಬಂದಿದೆ. ಹೀಗಾಗಿ ಮಹೇಶ್ ಮತ್ತು ಸ್ನೇಹಿತರು ಸೇರಿ ನಾಗರಾಜ್ ಅವರನ್ನು ಕೊಲೆ ಮಾಡಿದ್ದಾರೆ ಎಂಬುದು ಆರೋಪಿಗಳ ವಿಚಾರಣೆಯಲ್ಲಿ ತಿಳಿದುಬಂದಿದೆ. ಮೈಸೂರು ಗ್ರಾಮಾಂತರ ವ್ಯಾಪ್ತಿಯ ಆರಕ್ಷಕ ವೃತ್ತ ನಿರೀಕ್ಷಕ ಶಿವನಂಜಶೆಟ್ಟಿ, ವರುಣ ಠಾಣೆಯ ಆರಕ್ಷಕ ಉಪ ನಿರೀಕ್ಷಕ ಚೇತನ್, ಸೆನ್ ವಿಭಾಗದ ಆರಕ್ಷಕ ನಿರೀಕ್ಷಕ ಪುರುಷೋತ್ತಮ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ನಿಶ್ಚಿತಾರ್ಥವಾಗಿದ್ದ ಶಿಕ್ಷಕಿ ಆತ್ಮಹತ್ಯೆ: ಖಾಸಗಿ ಶಾಲಾ ಶಿಕ್ಷಕಿಯೊಬ್ಬಳು ಯುವಕನ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ನಂದಿಪುರ ಗ್ರಾಮದಲ್ಲಿ ನಡೆದಿದೆ. ರೂಪಾ (26) ಸಾವಿಗೀಡಾದವರು. ಇವರು ಪಿರಿಯಾಪಟ್ಟಣ ತಾಲೂಕಿನ ನಂದಿಪುರ ಗ್ರಾಮದ ಹಾಲಯ್ಯ ಎಂಬವರ ಪುತ್ರಿ. ರಾವಂದೂರು ಗ್ರಾಮದ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದು, ನಿಶ್ಚಿತಾರ್ಥವಾಗಿತ್ತು. ಈ ನಡುವೆ ಅದೇ ಗ್ರಾಮದ ಕಾರ್ತಿಕ್ ಎಂಬ ಯುವಕ ಈಕೆಗೆ ನಿಶ್ಚಿತಾರ್ಥವಾದ ಮೇಲೆ ನನ್ನನ್ನೇ ಪ್ರೀತಿಸಬೇಕು, ಮದುವೆ ಆಗಬೇಕು ಎಂದು ಪೀಡಿಸುತ್ತಿದ್ದನಂತೆ. ಇದರಿಂದಾಗಿ ಮೊದಲೇ ನಿಶ್ಚಿತಾರ್ಥವಾಗಿದ್ದ ರೂಪಾ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ತಂದೆ ಹಾಲಯ್ಯ ನೀಡಿದ ದೂರಿನನ್ವಯ ಬೆಟ್ಟದ ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೂರು ವರ್ಷದ ಮಗು ರಕ್ಷಣೆ: ಮಂಗಳೂರು ನಗರದ ಕೊಡಿಯಾಲ್ ಗುತ್ತಿನ ಫ್ಲ್ಯಾಟ್‌ವೊಂದರ ಕೋಣೆಯೊಳಗೆ ಬಾಕಿಯಾದ ಮೂರು ವರ್ಷದ ಮಗುವನ್ನು ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ ಘಟನೆ ಸೋಮವಾರ ನಡೆದಿದೆ. ನಾಲ್ಕನೇ ಮಹಡಿಯಲ್ಲಿದ್ದ ಫ್ಲ್ಯಾಟ್‌ವೊಂದರ ಕೋಣೆಯೊಳಗಿದ್ದ ಮಗು ಆಟವಾಡುತ್ತಾ ಬಾಗಿಲಿನ ಚಿಲಕ ಹಾಕಿಕೊಂಡಿತ್ತು. ಹೊರಗಿದ್ದವರಿಗೆ ಅದನ್ನು ತೆಗೆಯಲು ಸಾಧ್ಯವಾಗಲಿಲ್ಲ. ಮಾಹಿತಿ ಪಡೆದ ಪಾಂಡೇಶ್ವರ ಠಾಣೆಯ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ, ಅಪಾರ್ಟ್ಮೆಂಟ್ನ ಮೇಲ್ಭಾಗದಿಂದ ಹಗ್ಗದ ಸಹಾಯದಿಂದ ಮೇಲಿನಿಂದಿಳಿದು ಮಗುವಿದ್ದ ಕೋಣೆಯೊಳಗೆ ತೆರಳಿ ಮಗುವನ್ನು ರಕ್ಷಿಸಿದ್ದಾರೆ.
ಇದನ್ನೂ ಓದಿ: ಯುವತಿ ತಂದೆ ಮೇಲೆ ಕಾರು ಹತ್ತಿಸಿ ಪರಾರಿಯಾದ ನವವಿವಾಹಿತೆಯ ಮಾಜಿ ಪ್ರಿಯಕರ