ಮೈಸೂರು: ನಕಲಿ ಸಹಿಯೊಂದಿಗೆ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಆಸ್ತಿ ನೋಂದಣಿ ಮಾಡಿಸಿಕೊಳ್ಳಲು ಯತ್ನಿಸಿದ ಪುರಸಭಾ ಸದಸ್ಯೆಯ ಪತಿ ಸೇರಿದಂತೆ ಮೂವರು ವಂಚಕರನ್ನು ಕೆ.ಆರ್. ನಗರ ಪೊಲೀಸರು ಬಂಧಿಸಿದ್ದಾರೆ.
ಏನಿದು ಘಟನೆ ?
ಕೆ.ಆರ್. ನಗರ ಪಟ್ಟಣದ ಶ್ರೀರಾಮ ಬಡಾವಣೆಯ ನಿವಾಸಿಗಳಾದ ರಮೇಶ್ ಮತ್ತು ರೋಹಿಣಿ ದಂಪತಿ ತಮ್ಮ ಕುಟುಂಬ ಸದಸ್ಯರ ಜಂಟಿ ಖಾತೆಯಲ್ಲಿರುವ ಮನೆಯನ್ನು ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಳ್ಳಲು ಪಟ್ಟಣದ ಉಪನೋಂದಣಾಧಿಕಾರಿಗಳ ಕಚೇರಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ದಾಖಲಾತಿಗಳನ್ನು ಪರಿಶೀಲನೆ ನಡೆಸಿದಾಗ ಖಾತಾ ಏಕ್ಟ್ರಾಕ್ಟ್ನಲ್ಲಿದ್ದ ಮುಖ್ಯಾಧಿಕಾರಿಗಳ ಸಹಿಯಲ್ಲಿ ಬದಲಾವಣೆ ಕಂಡುಬಂದಿದ್ದು, ಅನುಮಾನಗೊಂಡ ಉಪನೋಂದಣಾಧಿಕಾರಿಗಳು ಪುರಸಭಾ ಮುಖ್ಯಾಧಿಕಾರಿಗಳಿಗೆ ತಿಳಿಸಿದ್ದಾರೆ.
ಮುಖ್ಯಾಧಿಕಾರಿಗಳು ದಾಖಲೆ ಪರಿಶೀಲಿಸಿದಾಗ ಅದರಲ್ಲಿ 2018ರಲ್ಲಿದ್ದ ಮುಖ್ಯಾಧಿಕಾರಿ ನಾಗಶೆಟ್ಟಿ ಎಂಬುವರ ಸಹಿ ನಕಲಿ ಮಾಡಿರುವುದು ಖಚಿತಪಡಿಸಿದ್ದು ನಕಲಿ ಸಹಿ ಸೃಷ್ಟಿಸಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರು ಸಲ್ಲಿಸಿದ್ದಾರೆ.
ಬಳಿಕ ಪಟ್ಟಣ ಪೊಲೀಸರು ಪುರಸಭಾ ಸದಸ್ಯೆಯ ಪತಿ ಪುಟ್ಟಸ್ವಾಮಿ ಸೇರಿದಂತೆ ಮೂವರನ್ನು ತನಿಖೆಗೊಳಪಡಿಸಿದಾಗ ನಕಲಿ ಸಹಿ ಮಾಡಿರುವುದನ್ನು ಒಪ್ಪಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಸಂಬಂಧ ಕೆ.ಆರ್. ನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.