ಮೈಸೂರು: ನಾಡ ಅಧಿದೇವತೆ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ನವರಾತ್ರಿ ಕೊನೆಯ ಧಾರ್ಮಿಕ ಕಾರ್ಯಕ್ರಮವಾದ ಮುಡಿ ಉತ್ಸವ ಮಂಗಳವಾರ ಸಂಜೆ ರೋಹಿಣಿ ನಕ್ಷತ್ರದಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಮೈಸೂರು ಮಹಾರಾಜರು ಚಾಮುಂಡೇಶ್ವರಿ ತಾಯಿಗೆ ನೀಡಿರುವ ವಜ್ರ ವೈಢೂರ್ಯ, ಪಚ್ಚೆ ಹಾಗೂ ಚಿನ್ನದ ಆಭರಣಗಳಿಂದ ಮೂರ್ತಿ ಶೋಭಿಸಿತು.
ನವರಾತ್ರಿ ಸಮಯದಲ್ಲಿ ಚಾಮುಂಡೇಶ್ವರಿ ಮೂಲ ಮೂರ್ತಿಗೆ 10 ದಿನಗಳ ಕಾಲ ಪ್ರತಿದಿನವೂ ಒಂದೊಂದು ವಿಶೇಷ ಅಲಂಕಾರ ಮಾಡಿ ನವರಾತ್ರಿ ಆಚರಣೆ ಮಾಡಲಾಗುತ್ತದೆ. ಅದೇ ರೀತಿ ಮೈಸೂರು ಮಹಾರಾಜರು ನೀಡಿರುವ ಚಾಮುಂಡೇಶ್ವರಿ ಉತ್ಸವ ಮೂರ್ತಿಗೂ 9 ದಿನಗಳ ಕಾಲ ವಿಶೇಷ ಅಲಂಕಾರ, ವಿಶೇಷ ಪೂಜೆಗಳು ಹಾಗೂ ದೇವಿಗೆ ದರ್ಬಾರ್ ಉತ್ಸವ ಮಾಡಲಾಗುತ್ತದೆ. ಇದರೊಂದಿಗೆ ಮಹೋತ್ಸವ ಕೂಡ ಇರುತ್ತದೆ. ಕಳೆದ ಶನಿವಾರ ಚಾಮುಂಡೇಶ್ವರಿ ತೆಪ್ಪೋತ್ಸವ ಬಳಿಕ ಶಯನೋತ್ಸವ ನಡೆಯಿತು. ಅ. 31ರಂದು (ನಿನ್ನೆ) ಮುಡಿ ಉತ್ಸವ ನಡೆಸಲಾಯಿತು.
ಮುಡಿ/ಜವೈರಿ ಉತ್ಸವ ಎಂದರೇನು?: ನವರಾತ್ರಿಗೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ಚಾಮುಂಡೇಶ್ವರಿ ತಾಯಿಯನ್ನು ಆವಾಹನೆ ಮಾಡಲಾಗುತ್ತದೆ. ಬಳಿಕ ನವರಾತ್ರಿ ಪೂಜೆ, ರಥೋತ್ಸವ, ತೆಪ್ಪೋತ್ಸವ ಆ ನಂತರದ ಕೊನೆಯ ಪೂಜೆಯೇ ಮುಡಿ ಅಥವಾ ಜವೈರಿ ಉತ್ಸವ. ಈ ಉತ್ಸವ ರೋಹಿಣಿ ನಕ್ಷತ್ರದಲ್ಲಿ ನಡೆಯುತ್ತದೆ. ಉತ್ಸವಕ್ಕಾಗಿ ಮಹಾರಾಜರು ಚಾಮುಂಡೇಶ್ವರಿ ತಾಯಿಗೆ ನೀಡಿರುವ ವಜ್ರ ವೈಢೂರ್ಯ, ಪಚ್ಚೆ ಹಾಗೂ ಚಿನ್ನದ ಆಭರಣಗಳನ್ನು ಜಿಲ್ಲಾ ಖಜಾನೆಯಲ್ಲಿ ಇಡಲಾಗಿರುತ್ತದೆ. ಈ ಎಲ್ಲಾ ಆಭರಣಗಳನ್ನು ಮುಡಿ ಉತ್ಸವದ ದಿನ ತಂದು, ದೇವಿಯನ್ನು ಅಲಂಕರಿಸಲಾಗುತ್ತದೆ.
ಇದನ್ನೂ ಓದಿ: ದಸರಾ ದಿನಗಳಲ್ಲಿ ಮೈಸೂರು ಅರಮನೆ, ಮೃಗಾಲಯಕ್ಕೆ ಲಕ್ಷಾಂತರ ಪ್ರವಾಸಿಗರ ಭೇಟಿ, ಆದಾಯ ಹೆಚ್ಚಳ
ಚಿನ್ನ ಹಾಗೂ ವಜ್ರದ ಹರಳುಳ್ಳ ಕಿರೀಟ, ಪಚ್ಚೆ ಹಾರಗಳು, ಚಿನ್ನ ಹಾಗೂ ವಜ್ರದ ಹರಳುಳ್ಳ ಜಡೆ ಸೇರಿದಂತೆ ಎಲ್ಲಾ ಆಭರಣಗಳನ್ನು ಮುಡಿ ಉತ್ಸವದ ದಿನ ಚಾಮುಂಡೇಶ್ವರಿ ಮೂರ್ತಿಗೆ ಧರಿಸಿ ಮುಡಿ ಉತ್ಸವ ಮಾಡಲಾಗುತ್ತದೆ. ಈ ದಿನ ಮಾತ್ರ ಎಲ್ಲಾ ಆಭರಣಗಳನ್ನು ಧರಿಸಿ, ಮಂಟಪೋತ್ಸವವನ್ನು ಮಾಡಲಾಗುತ್ತದೆ. ಇದರೊಂದಿಗೆ ನವರಾತ್ರಿಯ ವಿಶೇಷ ಪೂಜೆಗಳು ಕೊನೆಗೊಳ್ಳುತ್ತವೆ.
ಅ.15ರಿಂದ ಅ.24ರವರೆಗೆ ದಸರಾ ಉತ್ಸವ ಹತ್ತು ದಿನಕಾಲ ಅದ್ಧೂರಿಯಾಗಿ ನಡೆದಿತ್ತು. ಅ.26ರಂದು ಚಾಮುಂಡೇಶ್ವರಿಯ ವಾರ್ಷಿಕ ರಥೋತ್ಸವಕ್ಕೆ ಚಾಮುಂಡಿ ಬೆಟ್ಟದಲ್ಲಿ ಚಾಲನೆ ಸಿಕ್ಕಿತ್ತು. ರಥಕ್ಕೆ ಭಕ್ತರು ಹಣ್ಣು ಜವನ ಎಸೆದು ತಾಯಿಗೆ ಜೈಕಾರ ಹಾಕಿ ರಥ ಎಳೆದು ಪುನೀತರಾದರು. ಬಳಿಕ ಮೂಲ ಮೂರ್ತಿಯ ದರ್ಶನಕ್ಕೆ ಭಕ್ತರಿಗೆ ಅವಕಾಶ ಮಾಡಿಕೊಡಲಾಗಿತ್ತು.
ಇದನ್ನೂ ಓದಿ: ಮೈಸೂರು: ನಾಳೆ ಸಂಜೆ 6ರ ನಂತರ ಚಾಮುಂಡೇಶ್ವರಿ ದೇವಾಲಯ ಬಂದ್